ಸಾರಾಂಶ
ಜಲಜೀವನ ಯೋಜನೆ ಮಧ್ಯಪ್ರದೇಶದಲ್ಲಿ ಸಮರ್ಪಕವಾಗಿ ಜಾರಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜತೆಗೆ ಅಂತಾರಾಷ್ಟ್ರೀಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.
ಭಟ್ಕಳ: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿದ್ದು, ದೇಶಕ್ಕೆ ಹೆಮ್ಮೆಯಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಮೊದಲು ಅನುಷ್ಠಾನಗೊಳಿಸಿದ್ದು ಉತ್ತರ ಕನ್ನಡ ಮೂಲದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ ಎನ್ನುವುದು ವಿಶೇಷ.
ಈ ಯೋಜನೆ ಮಧ್ಯಪ್ರದೇಶದಲ್ಲಿ ಸಮರ್ಪಕವಾಗಿ ಜಾರಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜತೆಗೆ ಅಂತಾರಾಷ್ಟ್ರೀಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಮಧ್ಯಪ್ರದೇಶ ರಾಜ್ಯದ ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದ ತೇಜಸ್ವಿ ನಾಯ್ಕ ಅವರು ಜಲಜೀವನ ಮಿಷನ್ ಇದರ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದರ ಸದುಪಯೋಗ ಸಿಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರು.
ಪರಿಸರ ಸಂರಕ್ಷಣೆ ಹಾಗೂ ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುವ ಏಷಿಯಾ ಫೆಸಿಪಿಕ್ ಅವಾರ್ಡ ಎನ್ನುವ ಸಂಸ್ಥೆ ಮಧ್ಯಪ್ರದೇಶದ ಜಲಜೀವನ ಮೀಷನ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಿ ಪ್ರಶಂಸಿಸಿ ಅದನ್ನು ಅಂತಾರಾಷ್ಟ್ರೀಯ ರ‍್ಯಾಂಕಿಂಗ್‌ಗೆ ಅರ್ಹತೆಗೊಳಿಸಿದೆ. ಉತ್ತರ ಕನ್ನಡ ಸಿದ್ದಾಪುರ ತಾಲೂಕಿನವರಾದ ಐಎಎಸ್ ಅಧಿಕಾರಿ ತೇಜಸ್ವಿ ನಾಯ್ಕ ಅವರ ಸಾಧನೆ ದೇಶಕ್ಕೆ ಮಾದರಿಯಾಗಿದ್ದು, ಪ್ರಸ್ತುತ ಅವರ ಕೇಂದ್ರದ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.