ಆ.2 ಮತ್ತು 3 ರಂದು ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನ: ಡಾ.ಪ್ರಶಾಂತ್ ಕಾಳಪ್ಪ

| Published : Jul 26 2024, 01:30 AM IST

ಆ.2 ಮತ್ತು 3 ರಂದು ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನ: ಡಾ.ಪ್ರಶಾಂತ್ ಕಾಳಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರದ 15 ಕೇಂದ್ರಗಳಿಂದ ತಜ್ಞ ವೈದ್ಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಮೂವರು ಜಪಾನ್ ದೇಶದ ತಜ್ಞ ಸಂಶೋಧಕರು ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 18 ಮಂದಿ ಸಂಶೋಧಕರು ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ಮಂದಿ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕು ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಆ.2 ಮತ್ತು 3 ರಂದು ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಡೀನ್ ಡಾ.ಪ್ರಶಾಂತ್ ಕಾಳಪ್ಪ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆದಿಚುಂಚನಗಿರಿ ಯೂನಿವರ್ಸಿಟಿ, ಆದಿಚುಂಚನಗಿರಿ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕ್ಯುಲರ್ ಮೆಡಿಸಿನ್, ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯಿಂದ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಆ.2ರಂದು ಬೆಳಗ್ಗೆ 9.30ಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೆಮಿಕಲ್ ಬಯೋಲಜಿ ಸೊಸೈಟಿ ಅಧ್ಯಕ್ಷ ಪ್ರೊ.ತೇಜ್‌ಪಾಲ್ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಆದಿಚುಂಚನಗಿರಿ ವಿವಿ ಉಪ ಕುಲಪತಿ ಪ್ರೊ.ಎಂ.ಎ.ಶೇಖರ್ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸುವರು. ಕೆಮಿಕಲ್ ಬಯೋಲಜಿ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಪ್ರೊ.ಸಿದ್ದಾರ್ಥ ರಾಯ್, ಉಪಾಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಮಾಜಿ ಅಧ್ಯಕ್ಷ ಪ್ರೊ.ತಪಸ್ ಕೆ.ಕುಂದು ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು ಎಂದರು.

ರಾಷ್ಟ್ರದ 15 ಕೇಂದ್ರಗಳಿಂದ ತಜ್ಞ ವೈದ್ಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಮೂವರು ಜಪಾನ್ ದೇಶದ ತಜ್ಞ ಸಂಶೋಧಕರು ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 18 ಮಂದಿ ಸಂಶೋಧಕರು ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ಮಂದಿ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಶ್ವವನ್ನು ಕಾಡುತ್ತಿರುವ ಕ್ಯಾನ್ಸರ್ ಬಗ್ಗೆಯೇ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಈ ಬಗ್ಗೆಯೇ ಸಂಶೋಧಕರು ಸಹ ಉಪನ್ಯಾಸ ನೀಡುತ್ತಿರುವುದು ಸಹ ವಿಶೇಷವಾಗಿದೆ. ಸಮ್ಮೇಳನದಲ್ಲಿ ವಿಷಯಗಳ ವಿನಿಮಯದ ಜೊತೆಗೆ ಪಿಎಚ್‌.ಡಿ ಸೇರಿದಂತೆ ಉನ್ನತ ಮಟ್ಟದ ಸಂಶೋಧನೆಗೂ ಇದರಿಂದ ಅನುಕೂಲವಾಗಲಿದೆ ಎಂದರು.

ಉತ್ತಮ ಪ್ರಬಂಧಗಳನ್ನು ಮಂಡಿಸುವ ಐದು ಮಂದಿಗೆ ಅಮೆರಿಕನ್ ಕೆಮಿಕಲ್ಸ್ ಸೊಸೈಟಿಯವರು ಸರ್ಟಿಫಿಕೇಟ್ ನೀಡಲಿದ್ದಾರೆ. ಸಮ್ಮೇಳನಕ್ಕೆ ಸುಮಾರು ಎರಡೂವರೆ ಲಕ್ಷ ವೆಚ್ಚವಾಗಲಿದೆ. ಐಟಿಸಿಬಿ ಸಂಸ್ಥೆಯವರು ಒಂದು ಲಕ್ಷ ನೀಡಲಿದ್ದಾರೆ. ಉಳಿದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಎಂಎ ನಿರ್ದೇಶಕ ಡಾ.ಶೋಭಿತ್ ರಂಗಪ್ಪ, ಡಾ. ಅನಿಲ್‌ಕುಮಾರ್ ಇದ್ದರು.28 ರಂದು ಅಭಿನಂದನಾ ಸಮಾರಂಭ, ನಾಟಕ ಪ್ರದರ್ಶನ

ಮಂಡ್ಯ: ತಾಲೂಕಿನ ಕಾಗೆ ಮಂಟಿ ಗ್ರಾಮದಲ್ಲಿ ಚಾರ್ವಾಕ ವೈಚಾರಿಕ ಮಹಾಮನೆ ಸಂಸ್ಥೆ ಸಹಯೋಗದಲ್ಲಿ ಜು.28 ರಂದು ಅಭಿನಂದನಾ ಸಮಾರಂಭ ಮತ್ತು ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಕರ್ಮಿ ಗಿರೀಶ್ ಮಾಚಹಳ್ಳಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಿಕಿಹೊಳಿ ಅವರಿಗೆ ಅಭಿನಂದನೆ, ಮನುಸ್ಮತಿ, ಭಾರತ ಸಂವಿಧಾನ ನಾಟಕ ಪ್ರದರ್ಶನ ಪ್ರದರ್ಶನಗೊಳ್ಳಲಿದೆ ಎಂದರು.

ಸಿದ್ದಪ್ಪಾಜಿ, ಮಹದೇಶ್ವರ ಸ್ವಾಮಿ ಸೇರಿದಂತೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಶಿಲ್ಪಾ ಕೃತಿಗಳ ಅನಾವರಣ ಮತ್ತು ಪುಷ್ಪಾರ್ಚನೆ ನಡೆಯಲಿದೆ. ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ದೇವರಾಜ ಕೊಪ್ಪ, ಶಿವಲಿಂಗಯ್ಯ ಚಿಕ್ಕರಸನಕೆರೆ, ಜಯಸುಧಾ ಇದ್ದರು.