ಸಾರಾಂಶ
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಅನುದಾನ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು ₹180 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, ಆಗಸ್ಟ್ ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಲೋಹಿಯಾ ನಗರದಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯಕ್ಕೆ ಶನಿವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಎಲ್ಲ ಸೌಲಭ್ಯ ಹೊಂದಿರುವ ದೇಶದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಚಯ ಇದಾಗಿದೆ. ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಲು ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಕ್ರೀಡಾ ಸಂಕೀರ್ಣ ಕಲ್ಪಿಸುವ ನಿಟ್ಟಿನಲ್ಲಿ 16 ಎಕರೆ ವಿಶಾಲವಾದ ಪ್ರದೇಶದಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ರೀಡಾ ಸಂರ್ಕೀರ್ಣ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಈಜುಗೊಳ, ಬಾಸ್ಕೆಟ್ ಬಾಲ್, ಟೇಬಲ್ ಟೆನ್ನಿಸ್ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಡುವ ಕ್ರೀಡಾಪಟುಗಳಿಗೆ ಅಗತ್ಯವಾದ ಕ್ರೀಡಾ ಅಂಗಣಗಳು ಇರಲಿಲ್ಲ. ಅನಿವಾರ್ಯವಾಗಿ ಅವರು ದೂರದ ಬೆಂಗಳೂರಿಗೆ ಹೋಗಬೇಕಿತ್ತು. ಅಂತಹ ಕೊರತೆಯನ್ನು ಈ ಕ್ರೀಡಾ ಸಂಕೀರ್ಣ ನೀಗಿಸಲಿದೆ. ಇದಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಡಿ ₹172 ಕೋಟಿ ಹಾಗೂ ಕೇಂದ್ರ ಸರ್ಕಾರದ ಖೇಲೋ ಇಂಡಿಯಾದಡಿ ₹8 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಈಜುಗೊಳ, ಬಾಡ್ಮಿಂಟನ್, ರೈಫಲ್ ಶೂಟಿಂಗ್, ಬಾಸ್ಕೆಟ್‌ಬಾಲ್, ಟೆನ್ನಿಸ್, ಫುಟ್‌ಬಾಲ್, ರನ್ನಿಂಗ್ ಟ್ರ್ಯಾಕ್, ವಾಕಿಂಗ್ ಪಾಥ್ ಸೇರಿದಂತೆ ಒಟ್ಟು (ಒಳಾಂಗಣ ಮತ್ತು ಹೊರಾಂಗಣ ಸೇರಿ) ೧೯ ಕ್ರೀಡೆಗಳಿಗೆ ಸಂಕೀರ್ಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಪಟುಗಳಿಗೆ ವಾರ್ಮ್ ಅಪ್, ವಿಶ್ರಾಂತಿ ಗೃಹ, ಶೌಚಾಲಯ ಹಾಗೂ ೪೫೦ ಆಸನದ ಸಭಾಭವನ ಹಾಗೂ ಮ್ಯೂಸಿಕ್ ಆಡಿಟೋರಿಯಂ ನಿರ್ಮಿಸಲಾಗಿದೆ ಎಂದರು.
ವಿಶ್ವದರ್ಜೆಯೆ ಸಮುಚ್ಚಯ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಮಾದರಿ ಆಗಲಿದೆ. ಕುಸ್ತಿ ಹಾಗೂ ಯೋಗಾಸನಕ್ಕೆ ಪ್ರತ್ಯೇಕ ಸಂಕಿರ್ಣ ನಿರ್ಮಿಸಲಾಗುವುದು. 262 ಕಾರು ಮತ್ತು 400 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಗಲು ಮತ್ತು ರಾತ್ರಿಯ ವೇಳೆಯಲ್ಲಿಯೂ ಎಲ್ಲ ಆಟಗಳು ನಡೆಸಲು ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಓಲಂಪಿಕ್ ಆಟಕ್ಕೆ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ಮುಖ್ಯ ಗುರಿ ನಮ್ಮದಾಗಿದೆ. ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ಚಿಂತನೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಬೆಲ್ಲದ ಪ್ರತಿಕ್ರಿಯಿಸಿದರು.ಕೇಂದ ಸಚಿವೆ ಖಡ್ಸೆ ಪ್ರಶಂಸೆ:
ಇದೇ ವೇಳೆ ಕ್ರೀಡಾ ಸಂಕೀರ್ಣ ಪರಿಶೀಲಿಸಿದ ಕೇಂದ್ರದ ಯುವಜನ ಸೇವಾ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಹುಬ್ಬಳ್ಳಿಯಲ್ಲಿ ವಿಶ್ವದರ್ಜೆಯ ಸಂಕೀರ್ಣ ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ದೇಶದ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಉತ್ತಮ ಕಾರ್ಯ ಎಂದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಯ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಶ್ರಮಿಸುತ್ತಿದೆ. ಮೆಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್, ಮುದ್ರಾ ಸೇರಿದಂತೆ ಅನೇಕ ಕಾರ್ಯಕ್ರಮದ ಮೂಲಕ ಪ್ರತಿವರ್ಷ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ ಎಂದು ತಿಳಿಸಿದರು.