ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಮಕ್ಕಳು ಬೆಳೆಯುತ್ತಾ ಹೋದಂತೆ ಮಾತಿನ ನಡುವೆ ತೊದಲುತ್ತಿದ್ದರೆ ಪೋಷಕರು ಇದನ್ನು ತಿದ್ದುವ ಪ್ರಯತ್ನ ಮಾಡಬೇಕು. ಇಲ್ಲವೇ ಅದಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವುದು ಮುಖ್ಯವಾಗಿದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ಶರಣಬಸು ಗುದ್ದಿ ಹೇಳಿದರು.ತಾಲೂಕಿನ ದಿಂಡವಾರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ತೊದಲುವಿಕೆ ಅಭ್ಯಾಸವಾಗಿದ್ದರೆ ಆ ಮಕ್ಕಳು ದೊಡ್ಡವರಾದ ಮೇಲೆ ಅವಮಾನ ಅನುಭವಿಸುವ ಸಾಧ್ಯತೆ ಹೆಚ್ಚು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತೊದಲುವಿಕೆಯ ಕುರಿತು ಜಾಗೃತಿ ಮೂಡಿಸಲು ಅ.೨೨ ರಂದು ಅಂತಾರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನ ಆಚರಿಸಲಾಗುತ್ತದೆ ಎಂದರು.ಜಗತ್ತಿನಲ್ಲಿ ಸುಮಾರು ಶೇ.೧.೫ ರಷ್ಟು ಜನರು ತೊದಲುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಮಾಜವು ಅಂತಹ ಜನರನ್ನು ನೋಡುವ ರೀತಿಯೇ ಭಿನ್ನ. ಈ ಕುರಿತು ಜಾಗೃತಿ ಮೂಡಿಸುವ ಆಚರಣೆ ೧೯೯೮ ರಲ್ಲಿ ಆರಂಭವಾಗಿದೆ. ಇಂಟರ್‌ನ್ಯಾಷನಲ್ ಸ್ಟಟರಿಂಗ್ ಅಸೋಸಿಯೇಷನ್, ಇಂಟರ್‌ನ್ಯಾಷನಲ್ ಪ್ಲೂಯೆನ್ಸಿ ಅಸೋಸಿಯೇಷನ್ಸ್ ಈ ಸಮಸ್ಯೆಯನ್ನು ಗಂಭಿರ ಸಾಮಾಜಿಕ ಕಾಳಜಿಯ ಸಮಸ್ಯೆ ಎಂದು ಕರೆದಿದೆ ಎಂದು ವಿವರಿಸಿದರು.ಮುಖ್ಯಗುರು ಮಹಿಬೂಬ ನದಾಫ ಮಾತನಾಡಿ, ತೊದಲುವಿಕೆ ಸಮಸ್ಯೆಎದುರಿಸುತ್ತಿರುವ ಜನರನ್ನು ನೋಡುತ್ತೇವೆ. ತೊದಲುವಿಕೆ ಕುರಿತು ಅರಿವು ಮೂಡಿಸಲು, ಶಿಕ್ಷಣ ನೀಡುವ ಸಲುವಾಗಿ ಈ ದಿನ ಮಹತ್ವದಾಗಿದೆ. ಈ ದಿನದ ಆಚರಣೆ ತೊದಲುವಿಕೆಯಿಂದ ಬಳಲುತ್ತಿರುವ ಜನರ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಚ್.ಐ.ಕುರುಣದ, ಶ್ರೀಶೈಲ ನಾಗೂರ ಇತರರು ಇದ್ದರು.