ಮಾನವ ಜನ್ಮ ಶ್ರೇಷ್ಠವಾದದ್ದು, ಹೀಗಾಗಿ ಮನುಷ್ಯರಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಪ್ರಕೃತಿಯ ಪಂಚಭೂತ ಶಕ್ತಿಗಳನ್ನು ಅನುಭವಿಸುವ ಭಾಗ್ಯವುಳ್ಳವರು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಬೇಕಾದಲ್ಲಿ ಸಾರ್ವಜನಿಕರಲ್ಲಿ ಇದರ ಬಗ್ಗೆ ಹೆಚ್ಚು ಅರಿವನ್ನು ಮೂಡಿಸುವುದು ಅಗತ್ಯ ಎಂದು ನಗರ ಸಂಚಾರ ಉಪ ವಿಭಾಗದ ಎಸಿಪಿ ಎಂ. ಶಿವಶಂಕರ್ ತಿಳಿಸಿದರು.ನಗರದ ಕೇಂದ್ರ ಗ್ರಂಥಾಲಯದ ಕಿರು ಸಭಾಂಗಣದಲ್ಲಿ ವಿವೇಕಾ ಆರೋಗ್ಯ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಹಾಗೂ ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಮಾನವ ಜನ್ಮ ಶ್ರೇಷ್ಠವಾದದ್ದು, ಹೀಗಾಗಿ ಮನುಷ್ಯರಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಪ್ರಕೃತಿಯ ಪಂಚಭೂತ ಶಕ್ತಿಗಳನ್ನು ಅನುಭವಿಸುವ ಭಾಗ್ಯವುಳ್ಳವರು. ಈ ಉತ್ತಮ ಅನುಭವಗಳನ್ನು ಅನುಭವಿಸದೇ ಕೇವಲ ಹಣ, ಅಧಿಕಾರ, ಅಂತಸ್ತು, ತಾರತಮ್ಯ ಇತ್ಯಾದಿಗಳಲ್ಲಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ವಿಷಾದಿಸಿದರು.ಆಧ್ಯಾತ್ಮಿಕತೆ ರೂಢಿಸಿಕೊಂಡ ಮನುಷ್ಯ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲರು. ಇಂತಹ ಆರೋಗ್ಯವಂತ ಮನುಷ್ಯರಲ್ಲಿ ಜೀವನ ವ್ಯರ್ಥ ಮಾಡಿಕೊಳ್ಳುವ/ ಅಂತ್ಯಗೊಳಿಸುವ ಭಾವನೆ ಮೂಡುವುದಿಲ್ಲ. ಪ್ರತಿಯೊಬ್ಬರು ಆ ಕ್ಷಣಕ್ಕಾಗಿ ಬದುಕುವುದು, ಆ ಕ್ಷಣಗಳನ್ನು ಅನುಭವಿಸುವುದು ರೂಢಿಸಿಕೊಳ್ಳಬೇಕು. ಕಳೆದು ಹೋದ ಸಮಯದ ಬಗ್ಗೆ ವ್ಯಥೆ ಪಡುವುದಾಗಲೀ, ಮುಂದಿನ ಭವಿಷ್ಯದ ಬಗ್ಗೆ ತುಂಬಾ ಚಿಂತಿಸುವುದಾಗಲೀ ಮಾಡಬಾರದು. ಜೀವನ ಇದ್ದಂತೆ ಸ್ವೀಕರಿಸುವುದು ಸಾಮಾಜಿಕ ಪಿಡುಗುಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಅವರು ಕಿವಿಮಾತು ಹೇಳಿದರು.ಸಿಎಆರ್ ಎಸಿಪಿ ವೀರಣ್ಣ ಮಾತನಾಡಿ, ಯಾರೇ ಆಗಲಿ ಎಂತಹದೇ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳಬಾರದು. ನಾವು ಏನೇ ಪ್ರಯತ್ನಪಟ್ಟರೂ ಆಗಬೇಕಾದದ್ದನ್ನು ತಡೆಗಟ್ಟುವುದು ಅನೇಕ ವೇಳೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಜೀವನ ಬಂದ ಹಾಗೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೇ ಆತ್ಮಹತ್ಯೆಯಂತಹ ಆಲೋಚನೆಗಳು ದೂರವಾಗುತ್ತವೆ ಎಂದರು.ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರಮೇಶ್ ನರಸಯ್ಯ ಅಧ್ಯಕ್ಷತೆ ವಹಿಸಿದ್ದರು. ವಿವೇಕ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್, ಉತ್ತರ ವಲಯ ಉಪ ನಿರ್ದೇಶಕ ಎಚ್. ಚಂದ್ರಶೇಖರ್, ಬಾಲ್ಯ ಫೌಂಡೇಶನ್ ನ ಅನಿಲ್, ಉಮಾ ಅನಿಲ್, ಇನ್ನರ್ ವೀಲ್ ಸಂಸ್ಥೆಯ ಪದಾಧಿಕಾರಿಗಳು ಮೊದಲಾದವರು ಇದ್ದರು.