ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಮೈಕಾಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶುಶ್ರೂಷಕಿಯರಿಗೆ ಗೌರವ ಸಲ್ಲಿಸಲಾಯಿತು.ರೋಗಿಗಳು ಎಂತಹ ಸಮಸ್ಯೆಯನ್ನೇ ಎದುರಿಸುತ್ತಿದ್ದರೂ ಶುಶ್ರೂಷಕಿಯ ನಗುಮುಖ ಮತ್ತು ಸಾಂತ್ವಾನದ ಮಾತು ಬದುಕಿಗೊಂದು ಭರವಸೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಆರ್ಯ ಆಸ್ಪತ್ರೆಯ ಪದ್ಮ, ಪ್ರಜ್ವಲ್‌ಆಸ್ಪತ್ರೆಯ ಸುನಿತಾ ನಾಗರಾಜೇಗೌಡ, ನಂಜನಗೂಡು ಸರ್ಕಾರಿ ಆಸ್ಪತ್ರೆಯ ವಿಜಯಕುಮಾರಿ, ಕೆ.ಆರ್. ಆಸ್ಪತ್ರೆಯ ದಯಾ ಕುಮಾರಿ, ಎಚ್.ಡಿ. ಕೋಟೆ ಆಸ್ಪತ್ರೆಯ ಮಧುಮಾಲತಿ ಅವರಿಗೆ ಗೌರವ ಸಮರ್ಪಿಸಲಾಯಿತು.ಇಎಸ್ಐ ವೈದ್ಯಾಧಿಕಾರಿ ಎಂ.ಬಿ, ಚಿತ್ರಾ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಗುರು ಹಿರಿಯರ ಆಶೀರ್ವಾದ, ತಂದೆ ತಾಯಿಯ ಮಾರ್ಗದರ್ಶನದಿಂದ ಮಹಿಳೆಯರು ಇಂದು ಉನ್ನತ ಮಟ್ಟದಲ್ಲಿರಲು ಸಾಧ್ಯವಾಗುತ್ತಿದೆ. ವೈದ್ಯಕೀಯ ವೃತ್ತಿಯಲ್ಲಿ ಪ್ರೀತಿ, ಕಾಳಜಿ, ತಾಳ್ಮೆ, ತ್ಯಾಗ ಮನೋಭಾವ, ಮಾನಸಿಕ ಹಾಗೂ ಶಾರೀರಿಕ ಸದೃಡತೆ ಇದ್ದರೆ ಮಾತ್ರ ನಾವು ಮಾಡುವ ಸೇವೆಯಲ್ಲಿ ಆತ್ಮ ಸಂತೃಪ್ತಿ ಪಡೆಯಲು ಸಾಧ್ಯ ಎಂದು ಹೇಳಿದರು.ಪ್ರತಿಯೊಬ್ಬ ಮಹಿಳೆಯರು ಎರಡು ವರ್ಷಗಳಿಗೊಮ್ಮೆ ಸಂಪೂರ್ಣ ದೈಹಿಕ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಉದ್ಯಮಿ ಟಿ.ಎಂ. ಪ್ರಭಾವತಿ ಮಾತನಾಡಿ, ಹಿಂದೆ ಮಹಿಳೆಯರನ್ನು ಸೀಮಿತಗೊಳಿಸಲಾಗಿತ್ತು. ಆದರೆ ಈಗ ಮಹಿಳೆಯರ ಪಾತ್ರ ಪ್ರತಿಯೊಂದು ಕ್ಷೇತ್ರದಲ್ಲೂ ಕಾಣುತ್ತೇವೆ. ಇದಕ್ಕೆ ಕಾರಣ ಮಹಿಳೆಯರಲ್ಲಿರುವ ಆತ್ಮವಿಶ್ವಾಸ ಹಾಗೂ ಗುರಿ ಸಾಧಿಸುವ ಛಲ ಎಂದು ಹೇಳಿದರು.
ಮೈಕಾಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿ. ಅರ್ಚನಾ, ವಿದ್ಯಾರ್ಥಿ ಮತ್ತು ಉಪನ್ಯಾಸಕರ ಅಭಿವೃದ್ಧಿ ಘಟಕದ ಸಂಚಾಲಕಿ ಟಿ.ಜೆ. ರಮ್ಯಾ, ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.