ದೇಶ ಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ

| Published : Mar 15 2024, 01:22 AM IST

ಸಾರಾಂಶ

ಜೀವನದಲ್ಲಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ತಾಯಿಗಾಗಿ ನಾವು ದುಡಿಯಬೇಕು. ದುಡಿದು ದೇಶದ ಕೀರ್ತಿ ಬೆಳಗಬೇಕು

ಕನ್ನಡ ಪ್ರಭ ವಾರ್ತೆ ಮುಧೋಳ

ಜಗತ್ತಿನಲ್ಲಿ ಸೈನಿಕ ಹುದ್ದೆಗಿಂತ ಬೇರೆ ಯಾವ ಹುದ್ದೆಯೂ ಶ್ರೇಷ್ಠವಲ್ಲ. ತ್ಯಾಗ, ಬಲಿದಾನ, ದೇಶಕ್ಕಾಗಿ ಸಮರ್ಪಣಾ ಮನೋಭಾವ ಬೆಳೆಯುವುದು ಸೈನ್ಯದಲ್ಲಿ ಮಾತ್ರ ಎಂದು ಭಾರತೀಯ ಭೂ ಸೇನೆಯ ನಿವೃತ್ತ ಲೆಪ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿದರು.

ಸ್ಥಳೀಯ ಸಪ್ತಸ್ವರ ಸಂಗೀತ ನೃತ್ಯ ಸಾಂಸ್ಕ್ರತಿಕ ಸಂಸ್ಥೆ ವತಿಯಿಂದ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ನೆಪ ಹೇಳುವುದನ್ನು ಬಿಟ್ಟು ನಿರಂತರ ಪ್ರಯತ್ನಶೀಲರಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಜೀವನದಲ್ಲಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ತಾಯಿಗಾಗಿ ನಾವು ದುಡಿಯಬೇಕು. ದುಡಿದು ದೇಶದ ಕೀರ್ತಿ ಬೆಳಗಬೇಕು. ಇಡೀ ರಾಜ್ಯದಲ್ಲಿ ಮುಧೋಳ ನಗರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಎಲ್ಲ ರಂಗದಲ್ಲಿಯೂ ತನ್ನದೇ ಛಾಪು ಮೂಡಿಸುತ್ತಿರುವ ಮುಧೋಳ ನಗರಕ್ಕೆ ಭವ್ಯ ಇತಿಹಾಸವಿದೆ, ಮುಂದಿನ ದಿನಗಳಲ್ಲಿ ದೇಶವೇ ಹಿಂದುರುಗಿ ನೋಡುವಂತೆ ಮುಧೋಳ ನಗರ ಬೆಳೆಯಲಿದೆ ಎಂದು ಭವಿಷ್ಯ ನುಡಿದರು.

ನೂತನ ಸಿವಿಲ್‌ ನ್ಯಾಯಾಧೀಶೆಯಾದಿ ಆಯ್ಕೆಯಾಗಿರುವ ಶೃತಿ ತೇಲಿ ಅವರು ಸಪ್ತಸ್ವರ ಸಂಘಟನೆಯವರಿಂದ ಸತ್ಕಾರ ಸ್ವಿಕರಿಸಿ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸುವುದು ಮಹಿಳಾ ದಿನಾಚರಣೆ ಮುಖ್ಯ ಉದ್ದೇಶ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಸಪ್ತಸ್ವರ ಸಂಘಟನೆಯ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.

ಸ್ಯಾಮುವೆಲ್ ಮೆಮೋರಿಯಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷೆ ಮಾರ್ಗರೇಟ್ ಗೌಡರ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು. ಸ್ಥಳೀಯ ಆರ್‌.ಎಂ.ಜಿ ಕಾಲೇಜಿನ ಉಪನ್ಯಾಸಕಿ ಶೈಲಾ ಲಿಂಗದ ಅಧ್ಯಕ್ಷತೆವಹಿಸಿದ್ದರು.

ಮಹಿಳಾ ಸಾಧಕಿ ನಿವೃತ್ತ ಉಪನ್ಯಾಸಕಿ ವಿಜಯಾ ಹಂಗರಗಿ ಮತ್ತು ಮುಧೋಳ ತಾಲೂಕು ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಸುನೀತಾ ವೆಂಕಟೇಶ ಮಲಘಾಣ ಅವರನ್ನು ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು. ಸಪ್ತಸ್ವರ ಸಂಗೀತ ನೃತ್ಯ ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾತರಕಿಯ ಗಂಗಾಧರ ಗಾಣಿಗೇರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪದಾಧಿಕಾರಿಗಳಾದ ಮಾಲಾ ಪಾಟೀಲ, ನಿರ್ಮಲಾ ಮಲಘಾಣ, ಶಬಾನಾ ಜಮಾದಾರ, ಭಾರತಿ ಕತ್ತಿ, ಡಾ.ಪಾರ್ವತಿ ನಾಯ್ಕ, ಡಾ.ವೀಣಾ ಕಕರಡ್ಡಿ, ಸುಜಾತಾ ವಸ್ತ್ರದ, ಶಬಾನಾ ಜಮಾದಾರ, ಸುವರ್ಣಾ ಅವಟಿ, ವಿಭಾ ಕೋಲ್ಹಾರ, ರನ್ ಟಿವಿ ವಾಹಿನಿ ಮುಖ್ಯಸ್ಥ ಚಂದ್ರಶೇಖರ ಪಮ್ಮಾರ ಸೇರಿದಂತೆ ಇತರರು ಇದ್ದರು, ಶೃತಿ ನಿಗಡೆ ಮತ್ತು ಮಹಾಂತೇಶ ಹಿರೇಮಠ ನಿರೂಪಿಸಿ, ವಂದಿಸಿದರು.