ಚನ್ನರಾಯಪಟ್ಟಣ: ವಿಶ್ವ ನಲ್ಲಿ ಕೆಲಸಗಾರರ ದಿನದ ಪ್ರಯುಕ್ತ ಮಾ. 11ರಂದು ದಿನಾಚರಣೆ ಹಾಗೂ ನೀರು ಉಳಿಸಿ ಜೀವ ರಕ್ಷಿಸಿ ಎಂಬ ಶೀರ್ಷಿಕೆಯಡಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಿನಲ್ಲಿ ಕೆಲಸಗಾರರ ಸಂಘದ ಅಧ್ಯಕ್ಷ ಆಂಥೋನಿ ಹೇಳಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಗೃಹಬಳಕೆ, ಕಟ್ಟಡ ನಿರ್ಮಾಣ, ಕೈಗಾರಿಕೆ ಕ್ಷೇತ್ರಗಳಲ್ಲಿ ನೀರಿನ ಯೋಜಿತ ಬಳಕೆಯಿಂದಾಗಿ ಸಂರಕ್ಷಿಸಬೇಕು ಎಂದರು. ಜಲ ಸಾಕ್ಷರತೆಗೆ ಮಹತ್ವ ನೀಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಲಭ್ಯವಾಗುತ್ತಿರುವ ಕುಡಿಯುವ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಜಲ ಜಾಗೃತಿ ಮೂಲಕ ಜೀವಜಲ ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ತಾಲೂಕು ನಲ್ಲಿ ಕೆಲಸಗಾರರ ಸಂಘದ ವತಿಯಿಂದ ವಿಶ್ವ ಕೆಲಸಗಾರರ ದಿನದಂದು "ನೀರು ಉಳಿಸಿ ಜೀವ ರಕ್ಷಿಸಿ " ಎಂಬ ಘೋಷವಾಕ್ಯದೊಂದಿಗೆ ಪಟ್ಟಣದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದ ಬಳಿಯಿಂದ ಜಾಥಾ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದರು.ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಬಿಜೆಪಿ ಮುಖಂಡ ಸಿ.ಆರ್‌. ಚಿದಾನಂದ್, ನಲ್ಲಿ ಕೆಲಸಗಾರರ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಸೇರಿದಂತೆ ತಾಲೂಕಿನ ಗಣ್ಯರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳು, ಪಿಂಚಣಿ ಹಾಗೂ ಸದಸ್ಯರ ನೋಂದಣಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲಾಗುವುದು. ತಾಲೂಕಿನ ನಲ್ಲಿ ಕೆಲಸಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಉಪಾಧ್ಯಕ್ಷ ನಿಂಗೇಗೌಡ, ಖಜಾಂಚಿ ಲಕ್ಷ್ಮೀಶ್, ಸಹ ಕಾರ್ಯದರ್ಶಿ ಎನ್.ರಾಜು, ನಿರ್ದೇಶಕರಾದ ಸಿ.ಕೆ.ರಘು, ಸಂದೇಶ್, ಸ್ವಾಮಿ, ಅರುಣೇಶ್ ಸಿ.ಆರ್‌. ಮಂಜುನಾಥ್ ಹಾಗೂ ಇತರರು ಇದ್ದರು.