ಸಾಂಪ್ರದಾಯಿಕ ಅರಮನೆ ಅಂಗಳದಲ್ಲಿ ಯೋಗ ಪ್ರದರ್ಶಿಸಿದ್ದು ಮಕ್ಕಳಿಗೆ ಮರೆಯಲಾಗದ ಸವಿನೆನಪನ್ನು

ಕನ್ನಡಪ್ರಭ ವಾರ್ತೆ ಮೈಸೂರುಅರಮನೆ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಎರಡನೇ ಆವೃತ್ತಿಯು ವಿಕಲಚೇತನರ ಸಬಲೀಕರಣ ಹಾಗೂ ಒಳಗೊಳ್ಳುವಿಕೆಗೆ ಸಾಕ್ಷಿಯಾಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 28 ಅಂಧ ಮಕ್ಕಳು ತಮ್ಮ ಉತ್ಸಾಹಭರಿತ ಯೋಗ ಪ್ರದರ್ಶನದ ಮೂಲಕ ಇಡೀ ಪ್ರೇಕ್ಷಕ ಸಮೂಹವನ್ನು ಮಂತ್ರಮುಗ್ಧಗೊಳಿಸಿದರು.ಕೇಂದ್ರ ಆಯುಷ್ ಸಚಿವಾಲಯ ಹಾಗೂ ಮೈರಾ ಬಿಸಿನೆಸ್ ಸ್ಕೂಲ್ ಸಹಯೋಗದಲ್ಲಿ ಆಯೋಜಿಸಿದ್ದ ಈ ವಿಶೇಷ ಯೋಗಾಚರಣೆ, ವಿಕಲಚೇತನರಲ್ಲಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿತು. ಅಂಧ ಮಕ್ಕಳು ಸರಣಿ ಯೋಗಾಸನ ಅತ್ಯಂತ ಆತ್ಮವಿಶ್ವಾಸ, ಶಿಸ್ತು ಹಾಗೂ ಅದ್ಭುತ ಸಮನ್ವಯತೆಯೊಂದಿಗೆ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಇವರ ಅಪ್ರತಿಮ ಸಾಧನೆಗೆ ಗಣ್ಯರು, ಅತಿಥಿಗಳು ಹಾಗೂ ಸಾರ್ವಜನಿಕರಿಂದ ಭರಪೂರ ಶ್ಲಾಘನೆ ವ್ಯಕ್ತವಾಯಿತು. ಯೋಗವು ದೈಹಿಕ ಮಿತಿಗಳನ್ನು ಮೀರಿದ್ದಾಗಿದ್ದು, ಎಲ್ಲರಿಗೂ ಒಲಿಯುತ್ತದೆ ಎಂಬ ಸಂದೇಶವನ್ನು ಮಕ್ಕಳು ಸಾರಿದರು. ಸಾಂಪ್ರದಾಯಿಕ ಅರಮನೆ ಅಂಗಳದಲ್ಲಿ ಯೋಗ ಪ್ರದರ್ಶಿಸಿದ್ದು ಮಕ್ಕಳಿಗೆ ಮರೆಯಲಾಗದ ಸವಿನೆನಪನ್ನು ನೀಡಿತು.ಅಂಧ ಯೋಗಾಸಕ್ತರಿಗೆ ತರಬೇತಿ ನೀಡುವ ಶಿಕ್ಷಕರಿಗಾಗಿ ಸಿದ್ಧಪಡಿಸಲಾದ ವಿಶೇಷ ಕೈಪಿಡಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆಗೊಳಿಸಿದರು. ಅಂಧರಿಗೆ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸುರಕ್ಷಿತವಾಗಿ ಯೋಗ ತರಬೇತಿ ನೀಡಲು ಅಗತ್ಯವಿರುವ ತಂತ್ರ ಮತ್ತು ಪ್ರಾಯೋಗಿಕ ಮಾರ್ಗದರ್ಶನ ಈ ಕೈಪಿಡಿ ಒಳಗೊಂಡಿದೆ.