ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಅಂತರಾಜ್ಯ ಕಳ್ಳನ ಮೇಲೆ ಪೈರಿಂಗ್

| Published : Nov 24 2024, 01:48 AM IST

ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಅಂತರಾಜ್ಯ ಕಳ್ಳನ ಮೇಲೆ ಪೈರಿಂಗ್
Share this Article
  • FB
  • TW
  • Linkdin
  • Email

ಸಾರಾಂಶ

ಹಲ್ಲೆಗೆ ಮುಂದಾದ ವೇಳೆ ಸಿಪಿಐ ಧೀರಜ್ ಸಿಂಧೆ ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ ಆರೋಪಿಯನ್ನು ಎಚ್ಚರಿದರೂ ಪುನಃ ಪೊಲೀಸ್ ಪೇದೆಗಳಾದ ಅಶೋಕ ಗದಗ, ಹನುಮಂತಪ್ಪ ಓಲೇಕಾರ ಮೇಲೆ ಹಲ್ಲೆ ಮಾಡಿದ್ದಾನೆ

ರೋಣ: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಬಗರಅಲಿ ಅಮ್ಜದಲಿ ಇರಾನಿ ಎಂಬ ಆರೋಪಿಯ ಮೇಲೆ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ಗದಗ-ಬೇಟಗೇರಿ ಸಿಪಿಐ ಧೀರಜ್ ಸಿಂಧೆ ಪೈರಿಂಗ್ ಮಾಡಿ ಬಂಧಿಸಿದ ಘಟನೆ ಶನಿವಾರ ನಡೆದಿದೆ.

ಬೇಟಗೇರಿ ಠಾಣೆ ಸಿಪಿಐ ಧೀರಜ್ ಸಿಂಧೆ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಬೈಕ್ ಮತ್ತು ಉಂಗುರ ಕಳ್ಳತನ ಜಾಗೆ ಪಂಚನಾಮೆಗೆಂದು ತಾಲೂಕಿನ ಹೊಳೆಆಲೂರ ರೈಲ್ವೆ ಸ್ಟೇಶನ್ ಬಳಿ ತೆರಳಿ ಪಂಚನಾಮೆ ನಡೆಸಿ ವಾಪಸ್ ರೋಣ ಮಾರ್ಗವಾಗಿ ಬೇಟಗೇರಿಗೆ ತೆರಳುವಾಗ ಕುರಹಟ್ಟಿ ಬಳಿ ಆರೋಪಿ ಇದ್ದ ಪೊಲೀಸ್ ವಾಹನ ಕೆಟ್ಟಿದ್ದು, ವಾಹನ ದುರಸ್ತಿ ಮಾಡುವ ಸಂದರ್ಭದಲ್ಲಿ ಆರೋಪಿಯು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಹಿಡಿಯಲು ಹೋದ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಮುಂದಾದ ವೇಳೆ ಸಿಪಿಐ ಧೀರಜ್ ಸಿಂಧೆ ಗಾಳಿಯಲ್ಲಿ ಒಂದು ಬಾರಿ ಗುಂಡು ಹಾರಿಸಿ ಆರೋಪಿಯನ್ನು ಎಚ್ಚರಿದರೂ ಪುನಃ ಪೊಲೀಸ್ ಪೇದೆಗಳಾದ ಅಶೋಕ ಗದಗ, ಹನುಮಂತಪ್ಪ ಓಲೇಕಾರ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಸಿಪಿಐ ಧೀರಜ್‌ ಸಿಂಧೆ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಪೊಲೀಸರು ರೋಣ ಪಟ್ಟಣದ ಭಾರತರತ್ನ ಡಾ.ಭೀಮಸೇನ ಜೋಶಿ ಸಾರ್ವಜನಿಕ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪೊಲೀಸ್ ಪೇದೆಗಳಿಗೆ ರೋಣ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳ ಹಾಗೂ ಪೊಲೀಸ್ ಸಿಬ್ಬಂದಿ ಚಿಕಿತ್ಸೆಗಾಗಿ ದಾಖಲಾದ ರೋಣ ತಾಲೂಕಾಸ್ಪತ್ರೆಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ನರಗುಂದ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಗದಗ ಡಿವೈಎಸ್ಪಿ ಮಹಾಂತೇಶ ಸಜ್ಜನ, ರೋಣ ಸಿಪಿಐ ಎಸ್.ಎಸ್. ಬೀಳಗಿ, ರೋಣ ಪಿಎಸ್ಐ ಪ್ರಕಾಶ ಬಣಕಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ವೇಳೆ ಎಸ್ಪಿ ನೇಮಗೌಡ ಮಾತನಾಡಿ, ಆರೋಪಿ ಪೇದೆಗಳ ಮೇಲೆ ಏಕಾಏಕಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದರಿಂದ ಆತ್ಮರಕ್ಷಣೆಗಾಗಿ ಸಿಪಿಐ ಧೀರಜ್ ಸಿಂಧೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಬಗರ್‌ಅಲಿ ಅಮ್ಜದ್‌ಅಲಿ ಇರಾನಿ ಮೇಲೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯ ಕೊತ್ವಾಲಿಮಂಡಿ ಪೊಲೀಸ್ ಠಾಣೆ, ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯ ಮೋಘಲ್ಪುರ್ ಪೊಲೀಸ್ ಠಾಣೆ, ರಾಜಸ್ಥಾನದ ಜೈಪುರ ಉತ್ತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಹಿಡಿದು ಕೊಟ್ಟವರಿಗೆ ಉತ್ತರ ಪ್ರದೇಶ ಪೊಲೀಸರು ₹ 15 ಸಾವಿರ ಹಾಗೂ ರಾಜಸ್ಥಾನ ಪೊಲೀಸರು ₹ 5 ಸಾವಿರ ಬಹುಮಾನ ಘೋಷಿಸಿದ್ದಾರೆ. ಆರೋಪಿಯು ಹೊಳೆಆಲೂರ ರೈಲ್ವೆ ಸ್ಟೇಶನ್ ಬಳಿ ಒಂದು ಬೈಕ್ ಮತ್ತು ಉಂಗುರ ಕಳ್ಳತನ ಮಾಡಿದ್ದು, ಆ ಜಾಗೆ ಪಂಚನಾಮೆಗೆ ಆರೋಪಿಯನ್ನು ಕರೆದುಕೊಂಡು ಹೋಗಿ ವಾಪಾಸ್ ಬರುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪರಾರಿಗೆಯತ್ನಿಸಿದ್ದನು, ಈ ವೇಳೆ ಪೈರಿಂಗ್ ನಡೆದಿದೆ ಎಂದರು.