ಸಾರಾಂಶ
ಹಾವೇರಿ:ಅತಿವೃಷ್ಟಿ ಹಾಗೂ ವರದಾ ನದಿ ಪ್ರವಾಹದಿಂದ ಬೆಳೆ ಹಾನಿಗೀಡಾಗಿರುವ ಪ್ರದೇಶಗಳಿಗೆ ಹಾಗೂ ಮನೆಯ ಚಾವಣಿ ಕುಸಿದು ನಾಲ್ವರು ಮೃತಪಟ್ಟಿರುವ ಸವಣೂರು ತಾಲೂಕಿನ ಮಾದಾಪುರ ಗ್ರಾಮಕ್ಕೆ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಗುರುವಾರ ಭೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಇತ್ತೀಚೆಗೆ ಚಾವಣಿ ಕುಸಿದು ಬಿದ್ದು ನಾಲ್ವರು ಮೃತಪಟ್ಟಿದ್ದ ಹರಕುಣಿ ಕುಟುಂಬದ ಮನೆಗೆ ಭೇಟಿ ನೀಡಿದ ಸಲೀಂ ಅಹ್ಮದ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ೫೦ ಸಾವಿರ ರು. ಸಹಾಯ ಧನ ನೀಡಿದರು. ಸರ್ಕಾರದ ವತಿಯಿಂದ ಅವರಿಗೆ ದೊರಕಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ತಹಸೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಮಳೆಯ ಸಂದರ್ಭದಲ್ಲಿ ಶಿಥಿಲಾವಸ್ಥೆಯ ಮಣ್ಣಿನ ಮನೆಗಳಲ್ಲಿ ಸಾರ್ವಜನಿಕರು ವಾಸಿಸಬಾರದು ಎಂದು ಮನವಿ ಮಾಡಿದರು.ಬಳಿಕ ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಯ ಹಳೆಯ ಸೇತುವೆ ಬಳಿ ಆಗಮಿಸಿ ನದಿಯ ಅಕ್ಕಪಕ್ಕದ ಜಲಾವೃತಗೊಂಡ ಜಮೀನುಗಳನ್ನು ವೀಕ್ಷಿಸಿದರು. ಅಲ್ಲಿಂದ ನಾಗನೂರು-ಕೂಡಲ ಗ್ರಾಮದ ಸಂಪರ್ಕ ಸೇತುವೆ ತುಂಬಿ ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಸೇತುವೆ ಹಾಗೂ ಬೆಳೆ ಹಾನಿ ಪರಿಶೀಲಿಸಿದರು. ಇದೇ ವೇಳೆ ನೆರೆ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ತಹಸೀಲ್ದಾರ್ ಜಿ.ಎಸ್. ಶಂಕರ್ ಅವರಿಂದ ಮಾಹಿತಿ ಪಡೆದುಕೊಂಡರು. ನಾಗನೂರು ಗ್ರಾಮದಲ್ಲಿ ವರದಾ ನದಿ ನೀರು ನುಗ್ಗುವ ನದಿಪಾತ್ರದ ಮನೆಗಳ ಸ್ಥಳಾಂತರಿಸಲು ಜಾಗೆ ಗುರುತಿಸಲಾಗಿದ್ದು, ದರ ನಿಗದಿ ಸಂಬಂಧ ಶೀಘ್ರ ಸಭೆ ನಡೆಸಲಾಗುವುದು. ಬೆಳೆಹಾನಿ ಬಗ್ಗೆ ಸವೀಕ್ಷಾ ಕಾರ್ಯ ನಡೆದಿದೆ ಎಂದು ತಹಸೀಲ್ದಾರ್‌ರು ಮಾಹಿತಿ ನೀಡಿದರು. ಮಳೆಯಿಂದ ಮರ ಬಿದ್ದು ಮೃತಪಟ್ಟಿದ್ದ ಹಿರೇಕೆರೂರ ತಾಲೂಕಿನ ಚಿನ್ನಮುಳಗುಂದ ಗ್ರಾಮದ ಹೆಸ್ಕಾಂನ ಹೊರ ಗುತ್ತಿಗೆ ನೌಕರರಾದ ಮಂಜುನಾಥ ಪುಟ್ಟಲಿಂಗಣ್ಣನವರ ಮನೆಗೆ ಹಾಗೂ ರಟ್ಟೀಹಳ್ಳಿ ತಾಲೂಕಿನ ಯತ್ತಿನಹಳ್ಳಿ ಎಂ.ಎಂ., ಹನುಮಂತಪ್ಪ ನಾಮದೇವ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ತಲಾ ೨೫ ಸಾವಿರ ರು. ನೆರವು ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಯು.ಬಿ. ಬಣಕಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ, ಪ್ರಕಾಶಗೌಡ ಪಾಟೀಲ, ಜಮೀರ್ ಜಿಗರಿ ಇತರರು ಇದ್ದರು.
ಮಳೆಯಿಂದ ಬಿದ್ದಿರುವ ಮನೆಗಳ ಕುರಿತು ಅಧಿಕಾರಿಗಳು ನಿಖರ ಮಾಹಿತಿ ಪಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಸ್ಥಳೀಯ ಅಧಿಕಾರಿಗಳು ಯಾವುದೇ ತಪ್ಪುಗಳಿಗೆ ಅವಕಾಶ ನೀಡದೇ ಮನೆ ಬಿದ್ದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮಾನವೀಯತೆ ದೃಷ್ಟಿಯಿಂದ ಸರ್ಕಾರದ ಪರಿಹಾರ ದೊರಕಿಸಿಕೊಡಬೇಕು ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.