ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಶಿಕ್ಷಕರ ಬೆದರಿಸುವ ಕೆಲಸ

| Published : May 31 2024, 02:16 AM IST

ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಶಿಕ್ಷಕರ ಬೆದರಿಸುವ ಕೆಲಸ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಗುರವಾರ ಚಿತ್ರದುರ್ಗದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಕಾಂಗ್ರೆಸ್ ಅಭ್ಯರ್ಥಿಗಳು ಉನ್ನತ ಅಧಿಕಾರಿಗಳನ್ನು ಒಳಸಿಕೊಂಡು ನಮ್ಮ ಪರವಾಗಿರುವ ಶಿಕ್ಷಕರನ್ನು ಹೆದರಿಸುವ ಕಾರ್ಯ ಮಾಡುತ್ತಿದ್ದಾರೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಹಾಗೂ ವಿಪ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆ ಗುರುವಾರ ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತಯಾಚಿಸಿ ಮಾತನಾಡಿದ ಅವರು, ಈ ರೀತಿಯ ಬೆದರಿಕೆಗೆ ನಮ್ಮವರಾರೂ ಜಗ್ಗುವುದಿಲ್ಲ. ಕಾಂಗ್ರೆಸ್ ನವರು ಏನೇ ಕುತಂತ್ರ ಹಾಗೂ ಆಮಿಷ ಒಡ್ಡಿದರೂ ಬಲಿಯಾಗುವಷ್ಟು ದುರ್ಬಲ ಮನಸ್ಸಿನ ಶಿಕ್ಷಕರಲ್ಲವೆಂದು ಹೇಳಿದರು.

ಕಳೆದ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ ಶಿಕ್ಷಕರಿಗಾಗಿ ಮಾಡಿದ ಹೋರಾಟಗಳು, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಕಾರ್ಯಾದೇಶಗಳು, ಪರಿಹಾರ ನನ್ನ ಈ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ.

ಶಿಕ್ಷಕರ ಪರವಾಗಿ ಸದನದ ಒಳಗೂ ಹೊರಗೂ ಹೋರಾಟ ಮಾಡಿದ್ದೇನೆ. ಕಳೆದ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದೆ. ಆದರೆ ಈ ಬಾರಿ ಬಿಜೆಪಿ ಜೆಡಿಎಸ್‍ನ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದೇನೆ. ಈ ಹಿನ್ನಲೆ ನಮ್ಮ ಬಲ ಹಾಗೂ ಪರವಾದ ಒಲವು ಹೆಚ್ಚಾಗಿದೆ. ಶಿಕ್ಷಕರು ಮತ್ತು ಉಪನ್ಯಾಸಕ ಬಂಧುಗಳು ನನ್ನನ್ನು ಗೆಲ್ಲಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಆಮಿಷಗಳ ಧಿಕ್ಕರಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಯಿತು. ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ಎನ್.ಪಿಎಸ್ ತೆಗೆದು ಹಾಕಿ ಓಪಿಎಸ್‍ನ್ನು ತರುತ್ತೇವೆ ಎಂದು ಹೇಳಿದ್ದರು. ಜೊತೆಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತರುವುದಾಗಿ ತಿಳಿಸಿದ್ದರು. ಆದರೆ ಸರ್ಕಾರ ಬಂದು ವರ್ಷವಾದರೂ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಸರ್ಕಾರಿ ನೌಕರರಿಗೆ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿತ್ತು. ಹಾಗಾಗಿ ಶಿಕ್ಷಕ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದ ಮೇಲೆ ಭರವಸೆ ಉಳಿದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನಿರಾಣಿ ಮಾತನಾಡಿ, ಕಳೆದ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದ ಒಳಗೂ ಮತ್ತು ಹೊರಗೂ ನಾರಾಯಣಸ್ವಾಮಿ ಹೋರಾಟ ಮಾಡಿದ್ದಾರೆ, ಈ ಬಾರಿ ಅವರನ್ನು ಗೆಲ್ಲಿಸಿದರೆ ಸದನದಲ್ಲಿ ಹಿರಿಯ ಸದಸ್ಯರಾಗಿ ನಿಮ್ಮ ಬೇಡಿಕೆ ಈಡೇರಿಸುವಲ್ಲಿ ಶ್ರಮವಹಿಸುತ್ತಾರೆ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ನಾರಾಯಣಸ್ವಾಮಿಯವರು ವಿಧಾನಪರಿಷತ್‍ನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ವಿರುದ್ಧವಾಗಿ ರಾಜ್ಯ ಪಾಲಿಸಿಯನ್ನು ಜಾರಿಗೆ ಮುಂದಾಗಿದೆ. ನಾರಾಯಣಸ್ವಾಮಿಯವರನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ವಿನಂತಿಸಿದರು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ್, ನಗರಸಭಾ ಸದಸ್ಯ ಹರೀಶ್ ಕೃಷ್ಣಮೂರ್ತಿ, ಪರಶುರಾಮ್, ಶೀಲ, ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಜಯ್ಯಣ್ಣ, ನವೀನ್ ಚಾಲುಕ್ಯ, ತಿಪ್ಪೇಸ್ವಾಮಿ, ರಂಗಣ್ಣ ಉಪಸ್ಥಿತರಿದ್ದರು.