ಸಾಮ್ರಾಟ ಅಶೋಕ ಕೊಟ್ಟ ಕೊಡುಗೆ ದೇಶಕ್ಕೆ ಪರಿಚಯಿಸಿ: ಮಲ್ಲಿಕಾರ್ಜುನ್

| Published : Apr 08 2025, 12:34 AM IST

ಸಾಮ್ರಾಟ ಅಶೋಕ ಕೊಟ್ಟ ಕೊಡುಗೆ ದೇಶಕ್ಕೆ ಪರಿಚಯಿಸಿ: ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧನಲ್ಲಿ ಇದ್ದ ಸತ್ಯ, ಸರಳತೆ, ಪ್ರೀತಿ, ಕರುಣೆ, ವಿಶ್ವಾಸ, ನಂಬಿಕೆ ಇವೆಲ್ಲದರ ಆಧಾರದ ಮೇಲೆ ಭಾರತದಲ್ಲಿ ಜನಿಸಿದರೂ ಕೂಡ ಇಡೀ ವಿಶ್ವದಾದ್ಯಂತ ಬುದ್ಧನಿಗೆ ಗೌರವ ಸಿಕ್ಕಿದೆ. ಸಾಮ್ರಾಟ್ ಅಶೋಕ ಮೊಟ್ಟ ಮೊದಲ ಬಾರಿಗೆ ಪಶು ಚಿಕಿತ್ಸಾಲಯವನ್ನು ತೆರೆದು ಸಾಲುಮರಗಳನ್ನು ನೆಟ್ಟು ಶುದ್ಧ ಪರಿಸರ ಹಾಗೂ ಗುಣಾತ್ಮಕ ಆಡಳಿತವನ್ನು ನೀಡುವುದರ ಮೂಲಕ ಉತ್ತಮ ಆಡಳಿತ ನೀಡಿದನು.

ಕನ್ನಡಪ್ರಭ ವಾರ್ತೆ ಕನಕಪುರ

ಗುಣಾತ್ಮಕವಾದ ಆಡಳಿತ ನೀಡಿ ಬುದ್ಧನ ತತ್ವ ಸಿದ್ಧಾಂತಗಳನ್ನು ನೆಲೆಗೊಳಿಸಿದ ಸಾಮ್ರಾಟ ಅಶೋಕ ಮತ್ತು ಅವನು ಕೊಟ್ಟ ಕೊಡುಗೆಗಳನ್ನು ಭಾರತಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಾಮ್ರಾಟ ಅಶೋಕನ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮ್ರಾಟ ಅಶೋಕ ಬುದ್ಧನ ತತ್ವ, ಸಿದ್ಧಾಂತಗಳನ್ನು ತನ್ನ ಆಡಳಿತದ ಮೂಲಕ ಅನುಷ್ಠಾನಗೊಳಿಸಿ, ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿದನು. ಸಾಮ್ರಾಟ ಅಶೋಕ ಮತ್ತು ಗೌತಮ ಬುದ್ಧನಿಂದ ಭಾರತ ದೇಶಕ್ಕೆ ಒಂದು ಗೌರವ ಸಿಕ್ಕಿದೆ ಎಂದರು.

ಬುದ್ಧನಲ್ಲಿ ಇದ್ದ ಸತ್ಯ, ಸರಳತೆ, ಪ್ರೀತಿ, ಕರುಣೆ, ವಿಶ್ವಾಸ, ನಂಬಿಕೆ ಇವೆಲ್ಲದರ ಆಧಾರದ ಮೇಲೆ ಭಾರತದಲ್ಲಿ ಜನಿಸಿದರೂ ಕೂಡ ಇಡೀ ವಿಶ್ವದಾದ್ಯಂತ ಬುದ್ಧನಿಗೆ ಗೌರವ ಸಿಕ್ಕಿದೆ. ಸಾಮ್ರಾಟ್ ಅಶೋಕ ಮೊಟ್ಟ ಮೊದಲ ಬಾರಿಗೆ ಪಶು ಚಿಕಿತ್ಸಾಲಯವನ್ನು ತೆರೆದು ಸಾಲುಮರಗಳನ್ನು ನೆಟ್ಟು ಶುದ್ಧ ಪರಿಸರ ಹಾಗೂ ಗುಣಾತ್ಮಕ ಆಡಳಿತವನ್ನು ನೀಡುವುದರ ಮೂಲಕ ಉತ್ತಮ ಆಡಳಿತ ನೀಡಿದನು. ಇಂಥವರ ಬಗ್ಗೆ ಇತಿಹಾಸದ ಮೂಲಕ ದೇಶದ ಜನತೆಗೆ ಪರಿಚಯಿಸದೆ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಬೇರೆ ಬೇರೆ ದೇಶಗಳಲ್ಲಿ ಬುದ್ಧ ಮತ್ತು ಸಾಮ್ರಾಟ ಅಶೋಕನ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಗೌರವ ಸಲ್ಲಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಆರಕ್ಷಕರ ಟೋಪಿಗಳ ಮೇಲೆ, ಭಾರತ ರತ್ನ ಪ್ರಶಸ್ತಿಯಲ್ಲಿ, ನೋಟಿನ ಮೇಲೆ ಮಾತ್ರ ಅಶೋಕ ಲಾಂಛನ ಹಾಕಿದ್ದಾರೆ. ಆದರೂ ಈ ದೇಶದ ಹೆಚ್ಚಿನ ಜನರಿಗೆ ಸಾಮ್ರಾಟ್ ಅಶೋಕ ಮತ್ತು ಬುದ್ಧನ ಬಗ್ಗೆ ಪರಿಚಯವೇ ಇಲ್ಲದಂತೆ ಮಾಡಿದ್ದು, ಈ ನಾಡಿನ ದುರ್ದೈವವಾಗಿದೆ. ಕೇಂದ್ರ ಸರ್ಕಾರ ಇವರ ಕೊಡುಗೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಲು ಪ್ರೇರಣೆ ನೀಡುವಂತೆ ಒತ್ತಾಯಿಸಿದರು.

ಮುಖಂಡ ನವೀನ್ ಮಾತನಾಡಿ, ಬುದ್ಧ, ಸಾಮ್ರಾಟ ಅಶೋಕನಂತಹ ಹಲವಾರು ಇತಿಹಾಸಕಾರರ ಚರಿತ್ರೆ ಈ ದೇಶದ ಇತಿಹಾಸದ ಪುಟಗಳಲ್ಲಿ ಮರೆಯಾಗಿದೆ. ನಮ್ಮ ದೇಶಕ್ಕೆ ಬಹಳ ದೊಡ್ಡ ಕೊಡುಗೆಗಳನ್ನು ಕೊಟ್ಟ ಇಂತಹ ಮಹನೀಯರ ಇತಿಹಾಸ ಹೆಚ್ಚು ಹೆಚ್ಚು ಅಧ್ಯಯನವಾಗಬೇಕು. ಅವರ ಜೀವನ ಚರಿತ್ರೆ ಸಮಾಜಕ್ಕೆ ತಿಳಿಸಿಕೊಡಲು ಇಂತಹ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡುವ ಅಗತ್ಯವಿದೆ ಎಂದರು.

ಯುವಶಕ್ತಿ ವೇದಿಕೆ ಅಧ್ಯಕ್ಷ ಶ್ರೀನಿವಾಸ್, ಭರತ್, ಸೋಮು ಶ್ರೀನಿವಾಸ್, ಶಿವರಾಜು, ರೇಷ್ಮಾ ಸೇರಿದಂತೆ ಧಮ್ಮ ದೀವಿಗೆ ಚಾಲಕ ಟ್ರಸ್ಟ್ ನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.