ಅವಿಭಕ್ತ ಕುಟುಂಬಗಳಿದ್ದಾಗ ಕೃಷಿ ಲಾಭದಾಯಕ ಮತ್ತು ಆಸಕ್ತಿದಾಯಕವಾಗಿತ್ತು. ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿ ಕೃಷಿ ಅವನತಿಯತ್ತ ಸಾಗುತ್ತಿದೆ.
ಧಾರವಾಡ:
ಕೃಷಿ ಎಲ್ಲ ಸಂಸ್ಕೃತಿಗಳ ತಾಯಿ ಬೇರು. ಹಾಗಾಗಿ ಪಾರಂಪರಿಕ ಕೃಷಿ ಪದ್ಧತಿಯನ್ನು ರೈತರು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಮಠಾಧ್ಯಕ್ಷ ಶಿವಕುಮಾರ ಸ್ವಾಮೀಜಿ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕೃಷಿ ಮತ್ತು ಪರಿಸರ ಮಂಟಪವು ಆಯೋಜಿಸಿದ್ದ ತ್ರೈವಾರ್ಷಿಕ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅವಿಭಕ್ತ ಕುಟುಂಬಗಳಿದ್ದಾಗ ಕೃಷಿ ಲಾಭದಾಯಕ ಮತ್ತು ಆಸಕ್ತಿದಾಯಕವಾಗಿತ್ತು. ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿ ಕೃಷಿ ಅವನತಿಯತ್ತ ಸಾಗುತ್ತಿದೆ. ಮಕ್ಕಳಿಗೆ ರೈತರು ಸಂಪತ್ತಿನ ಬೆನ್ನು ಹತ್ತದೆ ಕೃಷಿ ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವಂತೆ ಮಾಡಬೇಕಾಗಿದೆ. ೫೦ ವರ್ಷಗಳಿಂದಿಚೆಗೆ ಕೃಷಿಯಲ್ಲಿ ನಾನಾ ಸಮಸ್ಯೆಗಳು ಉದ್ಭವವಾಗಿವೆ. ಮಣ್ಣಿನ ಸವೆತ, ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆ, ಹವಾಮಾನ ವೈಪರಿತ್ಯದಿಂದ ಕೃಷಿ ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ನಾವು ಸೇವಿಸುವ ಆಹಾರ ವಿಷಪೂರಿತವಾಗಿದ್ದು ಸಾವಯುವ ಕೃಷಿಯನ್ನು ಬಳಕೆಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ. ಶಶಿಕಾಂತ ಉಡಿಕೇರಿ, ಕವಿವ ಸಂಘವು ಹೊಸದಾಗಿ ಕೃಷಿ ಮತ್ತು ಪರಿಸರ ಮಂಟಪ ರಚಿಸಿ, ಸಂಘದ ಚಟುವಟಿಕೆಗಳನ್ನು ವಿಸ್ತರಿಸಿದ್ದು ಶ್ಲಾಘನೀಯ. ಇಂದು ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿರುವುದರಿಂದ ಇಂದಿನ ಮಕ್ಕಳಿಗೆ ಕೃಷಿಯ ಪ್ರಾಯೋಗಿಕ ಜ್ಞಾನವನ್ನು ಉಂಟು ಮಾಡುವುದು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿವಿ ಕುಲಪತಿ ಡಾ. ಶಶಿಕಾಂತ ಉಡಿಕೇರಿ, ಡಿ.ಟಿ. ಪಾಟೀಲ, ಚಂದ್ರಕಾಂತ ಬೆಲ್ಲದ, ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಡಾ.ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ ಇದ್ದರು.