ಸಾರಾಂಶ
ನೀರು ರಸ್ತೆಯಿಂದ ಹಿಡಿದು ಸಂಗಮನಾಲ ಮತ್ತು ಇತರ ಕಡೆ ಹರಿದು ಎಲ್ಲೆಡೆ ಗಬ್ಬುನಾರುತ್ತಿತ್ತು. ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಎನ್ನುತ್ತಾ ದಂಡ ವಿಧಿಸುವ ಗ್ರಾಪಂ ತ್ಯಾಜ್ಯ ನೀರನ್ನು ನೇರವಾಗಿ ಬಿಟ್ಟು ನಮಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ
ಕನ್ನಡಪ್ರಭ ವಾರ್ತೆ ಗೋಕರ್ಣ
ಇಲ್ಲಿನ ಮುಖ್ಯ ಕಡಲತೀರದಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಸ್ನಾನಗೃಹ ಮತ್ತು ಶೌಚಾಲಯದ ತ್ಯಾಜ್ಯ ನೀರು ದಂಡೆ ಭಾಗದ ವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಇಲ್ಲಿನ ನಿವಾಸಿಗಳು ಹೊಲಸು ವಾಸನೆ ನೀರು ಬಿಡುವುದನ್ನು ನಿಲ್ಲಿಸುವಂತೆ ಕೆಲಕಾಲ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಘಟನೆ ಶನಿವಾರ ಸಂಜೆ ನಡೆಯಿತು.ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಪರಿಣಾಮ ಶೌಚಾಲಯ ಮತ್ತು ಸ್ನಾನಗೃಹ ಭರ್ತಿಯಾಗಿತ್ತು. ನೀರು ರಸ್ತೆಯಿಂದ ಹಿಡಿದು ಸಂಗಮನಾಲ ಮತ್ತು ಇತರ ಕಡೆ ಹರಿದು ಎಲ್ಲೆಡೆ ಗಬ್ಬುನಾರುತ್ತಿತ್ತು. ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಎನ್ನುತ್ತಾ ದಂಡ ವಿಧಿಸುವ ಗ್ರಾಪಂ ತ್ಯಾಜ್ಯ ನೀರನ್ನು ನೇರವಾಗಿ ಬಿಟ್ಟು ನಮಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದರು.
ಸ್ಥಳಕ್ಕೆ ಬಂದ ಲಕ್ಷ್ಮೀಶ ಗೌಡ ಮತ್ತು ಪಾರ್ವತಿ ಶೆಟ್ಟಿ ಜನರ ಸಮಸ್ಯೆ ಖುದ್ದು ನೋಡಿ ಶೌಚಾಲಯ ನಿರ್ವಹಿಸುವವರ ಬಳಿ ತೆರಳಿ ತಕ್ಷಣ ಬಂದ ಮಾಡುವಂತೆ ಸೂಚಿಸಿದರು.ತ್ಯಾಜ್ಯ ನೀರು ಸೂಕ್ತ ವಿಲೇವಾರಿ ನಂತರ ಶೌಚಾಲಯ ತೆರೆಯುವಂತೆ ತಿಳಿಸಿದರು.ಪ್ರವಾಸಿಗರಿಗೆ ತೊಂದರೆ:
ಹೆಚ್ಚಿನ ಜನರು ಬಂದಾಗ ಅನುಕೂಲವಾಗಲಿ ಎಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯ ಜನರು ಆಗಮಿಸಿದ ವೇಳೆಯೇ ಬಂದಾಗಿರುವುದು ದುರಂತವಾಗಿದ್ದು, ತಕ್ಷಣ ಈ ಬಗ್ಗೆ ಗ್ರಾಪಂ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.