ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುಬ್ಬಳ್ಳಿಯ ಸಮೀರ್ ಮುಲ್ಲಾ ಮತ್ತು ತೈಸೀಮ್ ಮುಲ್ಲಾ ಪ್ರಕರಣ ಜಿಮ್‌ಗಳಲ್ಲಿ ನಡೆಯುತ್ತಿರುವ ಸಂಘಟಿತ ಲವ್ ಜಿಹಾದ್ ಹಾಗೂ ಲೈಂಗಿಕ ಶೋಷಣೆ ಕುರಿತು ಸಮಗ್ರ ತನಿಖೆಮಾಡಿ, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಮ್ ನಡೆಸುತ್ತಿರುವ ಸಮೀರ್ ಮುಲ್ಲಾ ಮತ್ತು ಆತನ ಸಹೋದರಿ ತೈಸೀಮ್ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರಿಗೆ ಪಾನೀಯಗಳಲ್ಲಿ ಮದ್ಧುಬೆರೆಸಿ ಅತ್ಯಾಚಾರ ನಡೆಸಿ, ನಗ್ನ ಫೋಟೋ ಮತ್ತು ವೀಡಿಯೋಗಳನ್ನು ತೆಗೆದು ಬ್ಲಾಕ್‌ಮೇಲ್ ಮಾಡುತ್ತಾ, ಇಸ್ಲಾಂಗೆ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಈ ಘಟನೆಯ ಪ್ರಮುಖ ಸಂಚಾಲಕಿಯಾಗಿ ತೈಸೀಮ್ ಕಾರ್ಯ ನಿರ್ವಹಿಸುತ್ತಿದ್ದು, ಹಿಂದೂ ಯುವತಿಯರನ್ನು ತನ್ನ ಸಹೋದರನಿಗೆ ಪರಿಚಯಿಸಿ ಮೋಸದಿಂದ ಈ ಜಾಲದಲ್ಲಿ ಸಿಲುಕಿಸುತ್ತಿದ್ದಾಳೆ ಎಂದು ಆರೋಪಿಸಿದರು.

ಪೊಲೀಸ್ ತನಿಖೆಯಲ್ಲಿ ಸಮೀರ್ ಮುಲ್ಲಾನ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಅರೆನಗ್ನ ಚಿತ್ರಗಳು ಪತ್ತೆಯಾಗಿದ್ದು, ಈಗ ಅನೇಕ ಪೀಡಿತರು ದೂರು ನೀಡಲು ಮುಂದೆ ಬರುತ್ತಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ದ್ವೇಷದ ಹಾಗೂ ರಾಜ್ಯದ ಅನೇಕ ಕಡೆ ಪಿಎಫ್‌ಐಗೆ ಸಂಬಂಧಿಸಿದ ಶಾಹೀನ್ ಗ್ಯಾಂಗ್ ಎಂಬ ಜಾಲವು ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪ್ರಕರಣಗಳು ಬಹಿರಂಗವಾಗಿವೆ ಎಂಬ ಶಂಕೆಗಳು ಇವೆ ಎಂದು ತಿಳಿಸಿದರು.

ಕೆಲವು ಜಿಮ್‌ಗಳು ಫಿಟ್ನೆಸ್ ಕೇಂದ್ರ ಹಾಗೂ ಮಸಾಜ್ ಕೇಂದ್ರಗಳ ಹೆಸರಿನಲ್ಲಿ ಮತಾಂತರದ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಮಹಿಳೆಯರು ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುವುದರ ಜೊತೆಗೆ ಅತ್ಯಾಚಾರಕ್ಕೆ ಒಳಗಾಗಿ ಮೋಸದಿಂದ ಮತಾಂತರವಾದಂತಹ ಘಟನೆಗಳು ನಡೆಯುತ್ತಿದ್ದು, ಇದು ಸಂಘಟಿತ ಸಂಚಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾವು ವಿಶೇಷ ಬೇಡಿಕೆ ಸಲ್ಲಿಸುತ್ತಿದ್ದು, ಕೂಡಲೇ ಈ ಜಿಮ್ ಜಾಲದ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟವರ ಮೊಬೈಲ್/ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿ ಎಂದರು.


ಸಮಿತಿಯ ಪ್ರಮುಖರಾದ ಸಿ.ರಮೇಶ್, ಪ್ರಫುಲ್ಲಚಂದ್ರ, ಜಗದೀಶ್, ಶಿವರಾಂ, ರಮೇಶ್‌ಬಾಬು, ಪರಮೇಶ್ವರ್, ನಾಗೇಶ್, ಬಸವರಾಜ್, ರೇಖೇಶ್ ಮಾನೆ, ಪ್ರದೀಪ್, ಮುಕುಂದ ಇದ್ದರು.