ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಮತ್ತು ನಕಲಿ ರಸಗೊಬ್ಬರ ಮಾರಾಟದ ಬಗ್ಗೆ ಬಂದಿರುವ ದೂರಿನ ಹಿನ್ನೆಲೆ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರೈತರು ಹಾಗೂ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ರೈತರ ಅಹವಾಲು ಆಲಿಸಿ ಮಾತನಾಡಿ, ರೈತರು ನೀಡಿದ ದೂರು ಹಾಗೂ ಆರೋಪಗಳ ವಿಷಯವಾಗಿ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ವರದಿ ನೀಡುವಂತೆ ತಾಕೀತು ಮಾಡಿದರು.ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಬೀಜ, ಗೊಬ್ಬರ ಮಾರಾಟದಲ್ಲಿ ಹಗರಣ ನಡೆಯುತ್ತಿದ್ದರೂ ಕೃಷಿ ಇಲಾಖೆ ಏನೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದಾಗ, ನನ್ನ ಅವಧಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು 15 ದಿನ ಕಾಲಾವಕಾಶ ನೀಡಿ ಎಂದು ಸಚಿವರು ಹೇಳಿದರು.ಕೊಪ್ಪಳ ಜಿಲ್ಲೆಯಲ್ಲಿ ಶೇ. 2ರಷ್ಟು ಗೊಬ್ಬರದ ಅಂಶವೂ ಇಲ್ಲದ ಕಳಪೆ ಗೊಬ್ಬರ ಮಾರಾಟ ಮಾಡಿರುವ ಅಂಶ ಪತ್ತೆಯಾಗಿದೆ. ಹಾವೇರಿ ಜಿಲ್ಲೆ ಸೇರಿದಂತೆ ಇತರೆಡೆಯೂ ಈ ಗೊಬ್ಬರ ವಿತರಣೆಯಾಗಿದೆ. ನಮ್ಮ ಹೋರಾಟದ ಫಲವಾಗಿ ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಗೊಬ್ಬರ ಉತ್ಪಾದಿಸುವ ಎರಡು ಕೈಗಾರಿಕೆಗಳನ್ನು ಮುಚ್ಚಿಸಿದ್ದೇವೆ ಎಂದು ಸಚಿವರ ಗಮನಕ್ಕೆ ತಂದರು.ಹಾವೇರಿ ಜಿಲ್ಲೆಯಲ್ಲಿ ಸಾಮ್ರಾಟ ಕಂಪನಿ ಗೊಬ್ಬರ ಮಾರಾಟ ಮಾಡಿದ ಎರಡು ಅಂಗಡಿಗಳು ಹಾಗೂ ನಿಸರ್ಗ ಕಂಪನಿ ಕಳಪೆ ಬೀಜ ಮಾರಾಟ ಮಾಡಿದ 12 ಅಂಗಡಿ ಮುಚ್ಚಬೇಕು ಎಂದು ರೈತ ಮುಖಂಡರಾದ ರವೀಂದ್ರ ಪಾಟೀಲ, ಈರಣ್ಣ ಹಲಗೇರಿ ಆಗ್ರಹಿಸಿದರು.ಕಳಪೆ ಬೀಜ ಮಾರಾಟಗಾರರಿಗೆ ಕಠಿಣ ಕಾನೂನು ಬರಬೇಕಿದೆ. ಕಾನೂನಿನ ದೌರ್ಬಲ್ಯದ ದುರ್ಬಳಕೆ ಮಾಡಿಕೊಂಡು ವ್ಯಾಪಾರಿಗಳೊಂದಿಗೆ ಸೇರಿಕೊಂಡು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.ಕೃಷಿ ಇಲಾಖೆಯ ಅಧಿಕಾರಿಗಳು ಸಬ್ಸಿಡಿ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ತೋರುವ ಆಸಕ್ತಿ, ಕಳಪೆ ಬೀಜ ವಿತರಣೆಯಲ್ಲಿ ತೋರುತ್ತಿಲ್ಲ. ಒಂದೇ ಬೀಜದ ಪಾಕೇಟ್ ಮೇಲೆ ಉತ್ಪಾದಕರ ಎರಡೆರಡು ಹೆಸರು ಮುದ್ರಣವಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದರು.ಧಾರವಾಡ ಬೀಜ ಪ್ರಯೋಗಾಲಯದಿಂದ ಸಂಗ್ರಹಿತ ಬೀಜಗಳನ್ನು ಪರೀಕ್ಷೆ ಮಾಡಲಾಗಿದೆ. ವಿಜ್ಞಾನಿಗಳ ಪರಿಶೀಲನೆ ಮಾಡಿದ್ದಾರೆ. ಕಳಪೆ ಬೀಜ ವಿತರಣೆ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡಿದರು.ನಿಸರ್ಗ ಕಂಪನಿ ಹೈದರಾಬಾದ್‌ನಲ್ಲಿ ಉತ್ಪಾದಿಸಿದ ಬೀಜ ಪೂರೈಸಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬಿತ್ತನೆ ಬೀಜ ವಿತರಣೆ, ಮರುಬಿತ್ತನೆ, ನಷ್ಟವಾಗಿದ್ದರೆ ರೈತರಿಗೆ ನೀಡಲು ಸಾಧ್ಯವಿರುವ ಪರಿಹಾರ ಕ್ರಮಗಳ ಕುರಿತು ವರದಿ ನೀಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು.ರೈತರಿಗೆ ಕಳಪೆ ಬೀಜ, ನಕಲಿ ಗೊಬ್ಬರ ವಿತರಣೆ ಸೇರಿದಂತೆ ಪ್ರಕರಣ ದಾಖಲಿಸಿ, ಶಿಕ್ಷೆ ಆಗಿರುವ ಪ್ರಕರಣ ಎಷ್ಟು ಎಂದು ಪ್ರಶ್ನಿಸಿದ ಸಚಿವರು, ಇಲಾಖೆಯ ತನಿಖಾ ಅಧಿಕಾರಿಗಳು ಸೂಕ್ತ ಸಾಕ್ಷಾಧಾರ ನೀಡದ ಕಾರಣ ಪ್ರಕರಣಗಳು ನ್ಯಾಯಾಲಯದಲ್ಲಿ ಶಿಕ್ಷೆ ಆಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಳಪೆ ಬೀಜ ಮಾರಾಟಗಾರರಿಗೆ ದಂಡ ವಿಧಿಸುವುದರಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ. ₹20 ಲಕ್ಷ ವಂಚಿಸಿದವ, ₹20 ಸಾವಿರ ದಂಡ ವಿಧಿಸಿದರೂ ವಂಚಕರು ಸುಲಭವಾಗಿ ವಂಚಕ ವೃತ್ತಿಪರತೆ ಮುಂದುವರಿಸುವ ಕೃತ್ಯದಲ್ಲಿ ತೊಡಗಲು ನೆರವಾಗಲಿದೆ. ಹೀಗಾಗಿ ಈ ಕೃತ್ಯದ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ ಎಂದರು.ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ ಸೇರಿದಂತೆ ಇತರರು ಇದ್ದರು. ನಿರ್ಲಕ್ಷ್ಯ ತೋರಿದರೆ ಅಮಾನತು: ಎಚ್ಚರಿಕೆ
ರೈತರ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು, ಜಿಲ್ಲೆಯಲ್ಲಿ ಕಳಪೆ ಬೀಜ, ನಕಲಿ ಗೊಬ್ಬರ ಮಾರಾಟದ ವಿಷಯದಲ್ಲಿ ಸೂಕ್ತ ತನಿಖೆ ನಡೆಸದಿದ್ದರೆ ರಾಜ್ಯ ಮಟ್ಟದ ತನಿಖೆ ನಡೆಸಲಾಗುವುದು. ಜಿಲ್ಲೆಯಲ್ಲಿ ಅಧಿಕಾರಿಗಳು ಅಸಮರ್ಥರಿಲ್ಲ ಎಂದಾದರೆ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದರು.