ಗ್ರಾಪಂ ಅಧ್ಯಕ್ಷರು, ಕೆಲವು ಸದಸ್ಯರು ಸಿಬ್ಬಂದಿ ಮೇಲೆ ದರ್ಪ ತೋರಿ ₹೧೫ ಲಕ್ಷ ಅನುದಾನದಲ್ಲಿ ಸುಮಾರು ₹೯ ಲಕ್ಷಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿ ದುರ್ಬಳಕೆಯಾಗಿದ್ದ ಕುರಿತು ಆರೋಪ ಕೇಳಿಬಂದಿತ್ತು.
ಮುಂಡಗೋಡ: ತಾಲೂಕಿನ ಬೆಡಸಗಾಂವ ಗ್ರಾಪಂನಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯೆಯೊಬ್ಬರು ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ ತನಿಖೆ ಆರಂಭವಾದೆ.
ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯಿತಿಯಲ್ಲಿ ಎಸ್ಕ್ರೋ ಖಾತೆಯಲ್ಲಿ ಜಮಾ ಆದ ₹೧೫ ಲಕ್ಷವನ್ನು ಯಾವುದೇ ಕ್ರಿಯಾಯೋಜನೆ ಮಂಜೂರು ಆಗದೆ ಇದ್ದರೂ, ಎಸ್ಟಿಮೇಟ್ ಮಾಡದೆ ಎಂಬಿ ಬರೆಯದೆ ಇದ್ದರೂ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಸೇರಿಕೊಂಡು ಯಾವುದೇ ಕಾಮಗಾರಿ ಮಾಡದಿದ್ದರೂ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಪಂ ಅಧ್ಯಕ್ಷರುಸ ಕೆಲವು ಸದಸ್ಯರು ಸಿಬ್ಬಂದಿ ಮೇಲೆ ದರ್ಪ ತೋರಿ ₹೧೫ ಲಕ್ಷ ಅನುದಾನದಲ್ಲಿ ಸುಮಾರು ₹೯ ಲಕ್ಷಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿ ದುರ್ಬಳಕೆಯಾಗಿದ್ದ ಕುರಿತು ಆರೋಪ ಕೇಳಿಬಂದಿತ್ತು.ಕಳೆದ ೫ ವರ್ಷಗಳಿಂದ ನರೇಗಾ(ಉದ್ಯೋಗ ಖಾತರಿ) ಯೋಜನೆಯಲ್ಲಿ ಪಂಚಾಯಿತಿ ಸಿಬ್ಬಂದಿಯಾದ ಗಣೇಶ್ ಎಸ್. ವಡ್ಕರ ಈ ಮೂವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕೆಲಸಗಳಲ್ಲಿ ಯಂತ್ರಗಳನ್ನು ಬಳಸಿಕೊಂಡು ಬಯಲುಸೀಮೆಯಿಂದ ಜನರನ್ನು ಕರೆಸಿ ನಕಲಿ ಫೋಟೋ ತಯಾರಿಸಿ ಉದ್ಯೋಗ ಖಾತರಿಯಲ್ಲಿ ಕೆಲಸಕ್ಕೆ ಬರದೇ ಇದ್ದರೂ ಅವರ ಖಾತೆಗೆ ಹಣವನ್ನು ಜಮಾ ಮಾಡಿಸಿದ್ದರು ಎಂದು ಆರೋಪಿಸಲಾಗಿತ್ತು. ಬೆಡಸಗಾಂವ ಗ್ರಾಪಂನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ಬಂದ ಹಿನ್ನೆಲೆ ತಾಪಂ ಸಹಾಯಕ ನಿರ್ದೇಶಕರು ಮತ್ತು ಲೆಕ್ಕ ಪರಿಶೋಧಕರ ತಂಡ ರಚನೆ ಮಡಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಟಿ.ವೈ. ದಾಸನಕೊಪ್ಪ ತಿಳಿಸಿದರು.