ಸಾರಾಂಶ
ಧರ್ಮಸ್ಥಳ ಕ್ಷೇತ್ರದ ಬಗ್ಗೆ ತೀರ ಅವಹೇಳನಕಾರಿ ಹೇಳಿಕೆ ಮೂಲಕ ತೇಜೋವಧೆಗೆ ಯತ್ನಿಸುತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಉಡುಪಿ: ಧರ್ಮಸ್ಥಳ ಗ್ರಾಮದಲ್ಲಿ ರಾಜ್ಯ ಸರ್ಕಾರದ ರಚಿಸಿದ ಎಸ್ಐಟಿ ತಂಡ ನಡೆಸುತ್ತಿರುವ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಎಸ್ಐಟಿ ತಂಡ ನೀಡಿಲ್ಲ. ಆದರೂ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ತೀರ ಅವಹೇಳನಕಾರಿ ಹೇಳಿಕೆ ಮೂಲಕ ತೇಜೋವಧೆಗೆ ಯತ್ನಿಸುತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರ ಎಸ್ಐಟಿ ಮೂಲಕ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಲು ಮುಂದಾಗಿದ್ದು ಸ್ವಾಗತಾರ್ಹ. ಆದರೆ ಕಮ್ಯೂನಿಸ್ಟ್ ಮನಸ್ಥಿತಿಯ ಜಾಲಗಳು ವ್ಯವಸ್ಥಿತವಾಗಿ ಹಿಂದುಗಳ ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ಹಲವು ಶತಮಾನಗಳ ಐತಿಹ್ಯವಿರುವ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಕೋಟ್ಯಂತರ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕರಾವಳಿ ಜಿಲ್ಲೆಯ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ತನಿಖೆ ಪ್ರಗತಿಯ ಹಂತದಲ್ಲಿರುವ ಸಂದರ್ಭದಲ್ಲಿ ಇಂತಹ ಆಧಾರರಹಿತ ಹೇಳಿಕೆಗಳು ತನಿಖೆಯ ಮೇಲೆಯೂ ಪರೋಕ್ಷ ಪ್ರಭಾವ ಬೀರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ತಕ್ಷಣ ಈ ಹಿಂದು ವಿರೋಧಿ ಶಕ್ತಿಗಳ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಹಿಂದುಗಳ ಶ್ರದ್ಧಾಭಕ್ತಿಯ ಕೇಂದ್ರಗಳ ತೇಜೋವಧೆಗೆ ಮುಂದಾಗಿರುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಧರ್ಮಸ್ಥಳ ಸಹಿತ ಹಿಂದೂ ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆ, ಭಕ್ತರ ಶ್ರದ್ಧಾ ಭಾವನೆಗಳನ್ನು ಕಾಪಾಡಲು ಸರ್ಕಾರ ಮುಂದಾಗಬೇಕಿದೆ ಎಂದು ಯಶ್ ಪಾಲ್ ಸುವರ್ಣ ಅಗ್ರಹಿಸಿದ್ದಾರೆ.