ಹತ್ಯೆ ಪ್ರಕರಣದ ತನಿಖೆ ಎಸ್‌ಐಟಿಗೆ ನೀಡಿ: ಬೊಮ್ಮಾಯಿ

| Published : Apr 20 2024, 01:01 AM IST

ಸಾರಾಂಶ

ಸಮಾಜ ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದರಿಂದ ರಾಜಾರೋಷವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ.

ಹುಬ್ಬಳ್ಳಿ:

ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ. ಸಮಾಜ ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದರಿಂದ ರಾಜಾರೋಷವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ನಗರದಲ್ಲಿ ನೇಹಾ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಈ ರೀತಿ ಹುಬ್ಬಳ್ಳಿಯಲ್ಲಿ ಯಾವತ್ತೂ ನಡೆದಿಲ್ಲ. ಇಂದು ಸಮಾಜಗಳ ನಡುವೆ ಸಾಮರಸ್ಯ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗದಗನಲ್ಲಿ ನಮ್ಮ ನಗರಸಭೆಯ ಉಪಾಧ್ಯಕ್ಷರ ಕುಟುಂಬದ ಕಗ್ಗೊಲೆಯಾಗಿದೆ. ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಹೇಳಿದವರ ಮೆಲೆ ಹಲ್ಲೆಯಾಗಿದೆ. ಸಮಾಜ ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಈ ಸರ್ಕಾರದಲ್ಲಿ ಗೂಂಡಾಗಳನ್ನು ರಕ್ಷಿಸುವವರು ಇದ್ದಾರೆ ಎನ್ನುವ ನಂಬಿಕೆ ಇರುವುದರಿಂದ ಈ ರೀತಿ ಘಟನೆ ನಡೆಯುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳಬಾರದು ಎಂದು ಹೇಳಿದರು.

ಕರ್ನಾಟಕ ಇನ್ನೊಂದು ಬಿಹಾರ ಆಗುತ್ತಿದೆ. ಗೃಹ ಸಚಿವರು, ಡಿಜಿಪಿ ಏನು ಮಾಡುತ್ತಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ವಿಧಾನ ಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ನೇಹಾ ಹತ್ಯೆ ಪ್ರಕರಣವನ್ನು ಎಸ್ಐಟಿ ಮೂಲಕ ತನಿಖೆ ನಡೆಸಬೇಕು. ಅಪರಾಧ ವಿಭಾಗದ ಡಿಜಿಪಿ ಮುಂದಾಳತ್ವ ವಹಿಸಿ ತನಿಖೆ ನಡೆಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣದ ತಾರ್ಕಿಕ ಅಂತ್ಯ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.