ಕರ್ನಾಟಕದ ಕಡಲ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಒಟ್ಟು ₹ 8,295 ಕೋಟಿ ಅಂದಾಜು ಹೂಡಿಕೆ ಸಾಮರ್ಥ್ಯದ ಎಂಟು ಕಡಲ ಯೋಜನೆಗಳ ಹೂಡಿಕೆದಾರರ ಕೈಪಿಡಿ ಹಾಗೂ ಮಾರುಕಟ್ಟೆ ಸಾಮಗ್ರಿಗಳನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಬಿಡುಗಡೆ ಮಾಡಿದೆ.
ಮಂಗಳೂರು: ಕರ್ನಾಟಕದ ಕಡಲ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಒಟ್ಟು ₹ 8,295 ಕೋಟಿ ಅಂದಾಜು ಹೂಡಿಕೆ ಸಾಮರ್ಥ್ಯದ ಎಂಟು ಕಡಲ ಯೋಜನೆಗಳ ಹೂಡಿಕೆದಾರರ ಕೈಪಿಡಿ ಹಾಗೂ ಮಾರುಕಟ್ಟೆ ಸಾಮಗ್ರಿಗಳನ್ನು ಕರ್ನಾಟಕ ಜಲಸಾರಿಗೆ ಮಂಡಳಿ ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ 7ನೇ ಕರ್ನಾಟಕ ರಾಜ್ಯ ಕಡಲ ಮತ್ತು ಜಲಮಾರ್ಗ ಸಾರಿಗೆ ಸಮಿತಿ ಸಭೆಯಲ್ಲಿ ಈ ಮಹತ್ವದ ಪ್ರಕಟಣೆ ಹೊರಬಿದ್ದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಕಡಲ ಯೋಜನೆಗಳ ಅನುಷ್ಠಾನ ತ್ವರಿತಗೊಳಿಸುವುದು, ಹೂಡಿಕೆ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಕಡಲ ಮೂಲಸೌಕರ್ಯವನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು.ಸಚಿವ ಸಂಪುಟದ ಅನುಮೋದನೆ ಪಡೆದಿರುವ ಎಂಟು ಯೋಜನೆಗಳು ಒಟ್ಟು ₹ 8,295 ಕೋಟಿ ಹೂಡಿಕೆ ಸಾಮರ್ಥ್ಯ ಹೊಂದಿವೆ. ಈ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಗಳಿಗೆ ಸಂಬಂಧಿಸಿದ ಟೆಂಡರ್ಗಳನ್ನು ಶೀಘ್ರದಲ್ಲೇ ಪ್ರಕಟಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ಸಿದ್ಧತೆ ನಡೆಸಿದೆ.ಹೂಡಿಕೆದಾರರ ಕೈಪಿಡಿಯಲ್ಲಿ ರಾಜ್ಯದ ಕಡಲ ಯೋಜನೆಗಳ ವಿವರ, ಹೂಡಿಕೆ ಅವಕಾಶಗಳು ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒದಗಿಸಲಾಗಿದೆ. ಇದರಿಂದ ದೇಶೀಯ ಹಾಗೂ ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದ ಕಡಲ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗಲಿದೆ.
ಮುಖ್ಯಮಂತ್ರಿ ಹಾಗೂ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ನಾಯಕತ್ವದಲ್ಲಿ ರಾಜ್ಯದ ಕಡಲ ಸಾಮರ್ಥ್ಯವನ್ನು ಆರ್ಥಿಕ ಅವಕಾಶಗಳಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಗಳಿಂದ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ, ಕಡಲ ಪರಿಸರ ವ್ಯವಸ್ಥೆಯ ಬಲವರ್ಧನೆ ಹಾಗೂ ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.ಸಭೆಯಲ್ಲಿ ಬಂದರುಗಳು ಮತ್ತು ಕಡಲ ಹಾಗೂ ಒಳನಾಡು ಜಲಸಾರಿಗೆ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಕ್ಯಾಪ್ಟನ್ ಸಂಜಯ್ ಟಿ. ಉಗಲ್ಮುಗಿವೆ, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್., ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸಿ. ಬಾಲಚಂದ್ರ ಮತ್ತಿತರರು ಇದ್ದರು.