ಜಾತ್ಯತೀತ, ಪಕ್ಷಾತೀತವಾಗಿ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಹಾವೇರಿ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿರುವುದು ನನ್ನ ಸೌಭಾಗ್ಯ ಎಂದು ಸಾಹಿತಿ ಡಾ. ಎಚ್.ಐ. ತಿಮ್ಮಾಪೂರ ಹೇಳಿದರು.
ಸವಣೂರು:ಜಾತ್ಯತೀತ, ಪಕ್ಷಾತೀತವಾಗಿ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಹಾವೇರಿ ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿರುವುದು ನನ್ನ ಸೌಭಾಗ್ಯ ಎಂದು ಸಾಹಿತಿ ಡಾ. ಎಚ್.ಐ. ತಿಮ್ಮಾಪೂರ ಹೇಳಿದರು.ಸಮ್ಮೇಳನ ಸ್ವಾಗತ ಸಮಿತಿ, ಕಸಾಪ ಹಾಗೂ ಸಾಹಿತ್ಯಸಕ್ತರ ವತಿಯಿಂದ ಗುಂಡೂರ ಗ್ರಾಮದ ಗುತ್ತಿ ಬಸವೇಶ್ವರ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಆಹ್ವಾನ ಕಾರ್ಯಕ್ರಮದಲ್ಲಿ ಸನ್ಮಾನದೊಂದಿಗೆ ಆಹ್ವಾನ ಸ್ವೀಕರಿಸಿ ಮಾತನಾಡಿದರು.
ತುಂಬಾ ಬಡತನದಲ್ಲಿರುವ ನನ್ನಂತಹ ವ್ಯಕ್ತಿಗೆ, ಹಿರಿಯ ಗೌರವವನ್ನು ಕೊಟ್ಟಿರುವುದಕ್ಕೆ ಸದಾ ಚಿರ ಋಣಿಯಾಗಿದ್ದೇನೆ. ನಮ್ಮೂರಿನ ಜನ ಎಲ್ಲ ಜಾತಿ ಜನಾಂಗದವರು ಒಂದು ಕುಟುಂಬ, ಒಂದು ಸಂಸಾರ ಎಂಬ ಭಾವನೆ ಗ್ರಾಮಸ್ಥರದ್ದಾಗಿದೆ. ಹಿರಿಯರು, ಸಾಹಿತಿಗಳು, ಸಮಾಜ ಸೇವಕರು, ಎಲ್ಲ ಸಂಘಟನೆಯವರು, ಎಲ್ಲ ಪಕ್ಷದವರು, ಮಾಧ್ಯಮದವರು ಸೇರಿದಂತೆ ಜಾತ್ಯತೀತವಾಗಿ ನನ್ನ ಸಾಹಿತ್ಯವನ್ನು ಗುರುತಿಸಿ ನನ್ನ ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ಚಿರ ಋಣಿಯಾಗಿದ್ದೇನೆ. 7 ತಾಲೂಕುಗಳಲ್ಲಿ ಚಿಕ್ಕದಾದ ಗುಂಡೂರು ಗ್ರಾಮದಲ್ಲಿ ಬಡ ಸಾಹಿತಿಯನ್ನು ಗುರುತಿಸಿ ಆಯ್ಕೆಗೊಳಿಸಿದ್ದೀರಿ. ನಿಮ್ಮ ಅಭಿಮಾನ, ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಬೇಕಾದರೆ ಕನ್ನಡ ಸಾಹಿತ್ಯಾಭಿಮಾನಿಗಳಾದ ನಮ್ಮ ನಿಮ್ಮಿಂದ ಸಾಧ್ಯವೇ ಹೊರತು. ಶ್ರೀಮಂತರಿಂದ, ಕಾನ್ವೆಂಟ್ ಶಾಲೆಯಲ್ಲಿ ಓದಿದವರಿಂದ ಅಸಾಧ್ಯ. ಆದ್ದರಿಂದ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಬೇಕಾಗುತ್ತದೆ ಎಂದರು.ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಸರ್ವರ ಮಾರ್ಗದರ್ಶನ ಮೂಲಕ ನಿವೃತ್ತ ಪ್ರಾಚಾರ್ಯರು ಸಾಹಿತಿಗಳಾದ ಹಜರೆಸಾಬ್ ತಿಮ್ಮಾಪುರ ಅವರನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿ ಇಂದು ಅಧಿಕೃತವಾಗಿ ಆಹ್ವಾನಿಸಲಾಗಿದೆ. 2018ರಲ್ಲಿ ನಡೆದ ಸವಣೂರ ತಾಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಿರುವದು ಹೆಮ್ಮೆಯ ಸಂಗತಿಯಾಗಿದೆ. ಆದ್ದರಿಂದ, ಸರ್ವರ ಸಹಕಾರದೊಂದಿಗೆ ಜಿಲ್ಲಾ ಸಮ್ಮೇಳನವನ್ನು ಸಹ ಅರ್ಥಪೂರ್ಣವಾಗಿ ಆಚರಿಸೋಣ ಎಂದರು.ಗ್ರಾಮದ ಪ್ರಮುಖರಾದ ಶಂಕರಗೌಡ ಪಾಟೀಲ ಮಾತನಾಡಿ, ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಉತ್ತಮ ಶಿಕ್ಷಣ ಪಡೆದು ಸಾಹಿತಿಯಾಗಿ ಗ್ರಾಮಕ್ಕೆ ಕೀರ್ತಿ ತಂದಿರುವ ಗ್ರಾಮದ ಹೆಮ್ಮೆಯ ಪುತ್ರ ಹಜರೆಸಾಬ್‌ನನ್ನು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆಯ್ಕೆಗೊಳಿಸಿದ್ದು ಗ್ರಾಮದ ಜನತೆಯೊಂದಿಗೆ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಹ ಅತ್ಯಂತ ಸಂಭ್ರಮ ಉಂಟು ಮಾಡಿದೆ. ಸರ್ವರು ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದರು.ಪ್ರಮುಖರಾದ ಸುಭಾಸ ಮಜ್ಜಗಿ, ಎಂ.ಜೆ.ಮುಲ್ಲಾ, ಜಯತೀರ್ಥ ದೇಶಪಾಂಡೆ, ಗಂಗಾಧರ ಬಾಣದ, ಮಲ್ಲಾರಪ್ಪ ತಳ್ಳಿಹಳ್ಳಿ, ಫಕ್ಕಿರಯ್ಯ ಹಿರೇಮಠ, ಯಲ್ಲಪ್ಪಗೌಡ ಪಾಟೀಲ, ಶಿವನಗೌಡ ಪಾಟೀಲ, ಫಕ್ಕಿರೇಶ ಕಡಕೊಳ್ಳಿ, ಪರಶುರಾಮ ಈಳಗೇರ, ಚಿದಾನಂದ ಬಡಗೇರ, ಹರೀಶಗೌಡ ಪಾಟೀಲ, ಮೌಲಾಸಾಬ್ ಹೊಂಬರಡಿ, ಮಹೇಶ ಅಪ್ಪಣ್ಣನವರ, ಪುಷ್ಪಾ ಬತ್ತಿ, ಪ್ರೇಮಾ ಚಳ್ಳಾಳ, ಸುನಂದಾ ಚಿನ್ನಾಪೂರ, ನಿಂಗನಗೌಡ ದೊಡ್ಡಗೌಡ್ರ, ಬಾಷಾಸಾಬ್ ತಿಮ್ಮಾಪೂರ ಹಾಗೂ ಇತರರು ಪಾಲ್ಗೊಂಡಿದ್ದರು.ಕಸಾಪ ಪದಾಧಿಕಾರಿಗಳಾದ ಫ್ರಭು ಅರಗೋಳ, ಚಂದ್ರಗೌಡ ಪಾಟೀಲ, ಸಿ.ವಿ.ಗುತ್ತಲ, ವಿಶ್ವನಾಥ ಹಾವಣಗಿ, ಸಿ.ಸಿ.ಕುಳೇನೂರ, ಎಂ.ಎಸ್.ಮಲ್ಲನಗೌಡ್ರ ನೇತೃತ್ವ ವಹಿಸಿ ನಿರ್ವಹಿಸಿದರು.