ಸುಂಟಿಕೊಪ್ಪ: ಅವೈಜ್ಞಾನಿಕ ಹೆದ್ದಾರಿ ಅಪಘಾತಗಳಿಗೆ ಆಹ್ವಾನ

| Published : Jul 30 2024, 12:33 AM IST

ಸುಂಟಿಕೊಪ್ಪ: ಅವೈಜ್ಞಾನಿಕ ಹೆದ್ದಾರಿ ಅಪಘಾತಗಳಿಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಹೆದ್ದಾರಿ ತುಂಬಾ ಕಿರಿದಾಗಿ ಹಲವು ಅಪಘಾತಗಳು ಸಂಭವಿಸಿದೆ. ಅದೇಷ್ಟೋ ಮಂದಿ ಜೀವ ಕಳೆದುಕೊಂಡ ನಿದರ್ಶನ ಜನಮಾನಸದಲ್ಲಿ ಉಳಿದಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪಟ್ಟಣದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೆದ್ದಾರಿಯು ತುಂಬಾ ಕಿರಿದಾಗಿ ಹಲವು ಅಪಘಾತಗಳು ಸಂಭವಿಸಿದೆ. ಅದೇಷ್ಟೋ ಮಂದಿ ಜೀವ ಕಳೆದಕೊಂಡ ನಿದರ್ಶನ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಕುಶಾಲನಗರದಿಂದ ಮಾಣಿ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ಕಲ್ಯಾಣ ಮಂಟಪಗಳಿಗೆ ಆಗಮಿಸುವ ಮಂದಿ ವಾಹನವನ್ನು ಮನಬಂದಂತೆ ಹೆದ್ದಾರಿಯ ಎರಡು ಬದಿಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನಗಳ ದಟ್ಟಣೆಯಿಂದ ಹೆದ್ದಾರಿಯಲ್ಲಿ ಬಸ್, ಟ್ರಕ್, ಕಾರು, ಜೀಪ್ ಹಾಗೂ ತುರ್ತು ಚಿಕಿತ್ಸೆಗೆ ಕರೆದೊಯ್ಯುವ ಅಂಬುಲೆನ್ಸ್ ವಾಹನಗಳು ಸುಗಮವಾಗಿ ಸಂಚರಿಸಲು ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ಸುಂಟಿಕೊಪ್ಪದಿಂದ ಗದ್ದೆಹಳ್ಳದವರೆಗೆ ತಿರುವುಗಳಿಂದ ಕೂಡಿದ್ದು, ಹೆದ್ದಾರಿಯಲ್ಲಿ ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಿರಿದಾಗಿದೆ. ಇದರಿಂದ ಹೆದ್ದಾರಿಯಲ್ಲಿ ಎರಡು ವಾಹನಗಳು ಸುಗಮವಾಗಿ ಸಂಚರಿಸುವುದು ಕ್ಲಿಷ್ಟಕರ. ಅಲ್ಲದೆ ಅಪಘಾತಗಳಿಗೆ ಪರೋಕ್ಷವಾಗಿ ಆಹ್ವಾನ ನೀಡುವಂತಿದೆ.

ಇಲ್ಲಿ ವಾಹನಗಳ ಅಪಘಾತಗಳು ಸಂಭವಿಸಿದಾಗ ಅದೆಷ್ಟೋ ಮಂದಿ ಜೀವಗಳನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ಮಂದಿ ಅಂಗವೈಕಲ್ಯತೆಗೆ ಗುರಿಯಾಗಿದ್ದಾರೆ ಎಂದರೂ ತಪ್ಪಾಗಲಾರದು.

ಸಾಮಾನ್ಯವಾಗಿ ಬಹುಪಯೋಗಿ ಕಟ್ಟಡಗಳನ್ನು ಕಟ್ಟುವ ಸಂದರ್ಭ ನೆಲ ಅಂತಸ್ತಿನಲ್ಲಿ ದ್ವಿಚಕ್ರ ಮತ್ತು ಚತುಷ್ಪಪಥ ವಾಹನಗಳಿಗೆ ನಿಲುಗಡೆ ಜಾಗವನ್ನು ಕಲ್ಪಿಸುವುದು ಅಗತ್ಯ. ಕಟ್ಟಡ ನಿರ್ಮಾಣ ಸಂದರ್ಭ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂಬ ಷರತ್ತು ವಿಧಿಸಿಯೇ ಅನುಮತಿ ಪತ್ರವನ್ನು ಸಂಬಂಧಿಸಿದ ಇಲಾಖೆಗಳು ನೀಡಬೇಕು. ಇದನ್ನು ಪಾಲಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ರಸ್ತೆ ಬದಿಯ ಎರಡು ಕಡೆಗಳಲ್ಲಿ ವಾಹನ ನಿಲುಗಡೆಗೊಂಡು ಸಮಸ್ಯೆ ಎದುರಾಗುತ್ತಿದೆ. ವಿಶೇಷವಾಗಿ ವಾರಂತ್ಯಗಳಲ್ಲಿ ಮತ್ತು ಸರಣಿ ರಜೆ ದಿನಗಳಲ್ಲಿ ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ, ತಿರುವು ಪ್ರದೇಶಗಳಲ್ಲಿ ವಾಹನಗಳನ್ನು ಮನಬಂದಂತೆ ನಿಲ್ಲಿಸಿ ಉಪಟಳ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತು ಹೆದ್ದಾರಿಯಲ್ಲಿ ಸಾವು ನೋವು ತಪ್ಪಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಮುಖ್ಯ ಎಂದು ತಿಳಿಸಿದ್ದಾರೆ.

ಪಂಚಾಯಿತಿಯಿಂದ ನೋಟಿಸ್‌: ಸಭಾಂಗಣ ಮಾಲೀಕರಿಗೆ ವಿವಾಹ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಸಭಾಂಗಣ ನೀಡುವಾಗ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಡಕು ಉಂಟಾಗದಂತೆ, ಹೆದ್ದಾರಿಯ ಎರಡು ಬದಿಯಲ್ಲಿ ವಾಹನ ನಿಲ್ಲಿಸದಂತೆ ಎಚ್ಚರ ವಹಿಸುವಂತೆ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗುವುದು. ಸುಂಟಿಕೊಪ್ಪ ಪಟ್ಟಣದಲ್ಲಿ ರಾ.ಹೆ. ಎರಡು ಬದಿಯಲ್ಲಿ ವಾಹನ ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಡಕು ಆಗುತ್ತಿದೆ. ಆಗಿಂದಾಗ್ಗೆ ಟ್ರಾಫಿಕ್‌ ಜಾಮ್ ಉಂಟಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಪೊಲೀಸ್ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ. ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ವಾಹನಗಳ ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ತಿಳಿಸಿದರು.

ಸುಂಟಿಕೊಪ್ಪ ಪಟ್ಟಣದಲ್ಲಿ ಹೆದ್ದಾರಿ ಬದಿಯಲ್ಲಿರುವ ಸಭಾಂಗಣಗಳ ಮಾಲೀಕರಿಗೆ ಮದುವೆ ಹಾಗೂ ಇನ್ನಿತರ ಸಭೆ ಸಂದರ್ಭಗಳಲ್ಲಿ ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸದಂತೆ ಸೂಕ್ತ ಸೂಚನೆಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೆದ್ದಾರಿಯ ಎರಡು ಬದಿ ವಾಹನಗಳನ್ನು ನಿಲ್ಲಿಸದಂತೆ ಒಂದು ಬದಿಯಲ್ಲಿ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹೇಳಿದರು.