ಸಾರಾಂಶ
ರಾಯಚೂರಿನ ಡಿಸಿ ಕಚೇರಿ ಆವರಣದಲ್ಲಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ಅಸಂಸದೀಯ ಪದ ಬಳಕೆ ಮಾಡಿ ನಿಂದಿಸಿರುವುದು ಖಂಡನೀಯ, ರಾಜ್ಯ ಸರ್ಕಾರ ತಕ್ಷಣ ಅವರನ್ನು ಅಮಾನತ್ತು ಮಾಡಬೇಕು ಹಾಗೂ ಅವರ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾಗಬೇಕು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಒತ್ತಾಯಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಲೋಕಾಯುಕ್ತ ಅಧಿಕಾರಿ ತಮ್ಮ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಬರ್ನಾಡ್ ಶಾ ಅವರ ಸಾಲುಗಳನ್ನು ಉಲ್ಲೇಖಿಸಿ ಅಸಂಸದೀಯ ಪದ ಬಳಕೆ ಮಾಡಿದ್ದು ಅದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಅಲ್ಲದೆ ಎಚ್‌ಡಿಕೆ ಅವರು ಇವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲಿದ್ದು, ಇದರ ಜೊತೆಗೆ ಕೇಂದ್ರ ಗೃಹ ಸಚಿವರಿಗೆ ಈಗಾಗಲೇ ದೂರು ಸಹ ನೀಡಲಾಗಿದೆ ಎಂದರು.
ಹಿಮಾಚಲ ಪ್ರದೇಶ ಕೇಡರ್‌ನ ಅಧಿಕಾರಿಯಾದ ಇವರು ಹವಾಮಾನ ನೆಪವೊಡ್ಡಿ ಕಳೆದ 25 ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು, ನೋಡಿದರೇ ಇವರ ಮೇಲೆ ಪ್ರಭಾವಿಗಳ ಕೃಪಾಕಟಾಕ್ಷವಿದೆ ಎನ್ನುವುದು ತಿಳಿಯುತ್ತದೆ. ಅಧೀನ ಅಧಿಕಾರಿಯಿಂದ ಕೋಟಿಗಟ್ಟಲೆ ಹಣ ವಸೂಲಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಇಂತಹ ಅಧಿಕಾರಿ ಬಗ್ಗೆ ಸಿಎಂ, ಡಿಸಿಎಂ, ಗೃಹ ಸಚಿವರು ಕ್ರಮ ವಹಿಸದೆ ಸಮರ್ಥಿಸಿಕೊಳ್ಳುತ್ತಿರುವುದು ನೋಡಿದರೆ ಸರ್ಕಾರವೇ ಇವರ ರಕ್ಷಣೆಗೆ ನಿಂತಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಜೆಡಿಎಸ್ ನಿಯೋಗದಿಂದ ದೂರು ನೀಡಲಾಗಿದೆ. ತಕ್ಷಣ ಸರ್ಕಾರ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ಮಾಡಲಾಗುತ್ತದೆ ಎಂದರು.ಈ ವೇಳೆ ಪಕ್ಷದ ಮುಖಂಡರಾದ ಮಹಾಂತೇಶ ಪಾಟೀಲ್, ವಿರೂಪಾಕ್ಷಿ, ರಾಜಾ ವೆಂಕಟಪ್ಪ ನಾಯಕ, ಶಿವಶಂಕರ, ಬುಡ್ಡನಗೌಡ ಸೇರಿದಂತೆ ಕಾರ್ಯಕರ್ತರು ಇದ್ದರು.