ಕಾಂಗ್ರೆಸ್‌ ಮುಖಂಡರ ವಿರುದ್ಧ ಸಿಡಿದೆದ್ದ ಇಕ್ಬಾಲ್ ಅನ್ಸಾರಿ

| Published : Feb 26 2024, 01:35 AM IST

ಸಾರಾಂಶ

ಪಕ್ಷದ ನಾಯಕರ ಎದುರಲ್ಲಿಯೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕುತ್ತಿಗೆ ಹಿಡಿದು ಹೊರಹಾಕಬೇಕು ಎಂದಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಕೊಪ್ಪಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಇಕ್ಬಾಲ್ ಅನ್ಸಾರಿ ತನ್ನ ಸೋಲಿಗೆ ಕಾಂಗ್ರೆಸ್ಸಿನ ಕೆಲವು ಮುಖಂಡರೇ ಕಾರಣವಾಗಿದ್ದಾರೆ. ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿ, ಗಾಲಿ ಜನಾರ್ದನ ರೆಡ್ಡಿ ಅವರನ್ನು ಗೆಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಈ ಕುರಿತು ಪಕ್ಷದ ವೇದಿಕೆಯಲ್ಲಿಯೇ ಮಾತನಾಡಿ, ಪಕ್ಷದ ನಾಯಕರ ಎದುರಲ್ಲಿಯೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕುತ್ತಿಗೆ ಹಿಡಿದು ಹೊರಹಾಕಬೇಕು ಎಂದಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ವೈಸ್ ಮೆಸೇಜ್ ಮೂಲಕ ಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. ನನ್ನ ಗಮನಕ್ಕೆ ತಾರದೇ ಸಭೆ ನಡೆಸುತ್ತಿರುವುದರಿಂದ ಅದರಲ್ಲಿ ಯಾರು ಸಹ ಭಾಗಿಯಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಕ್ಷದಲ್ಲಿರುವ ದೊಡ್ಡ ಮುಖಂಡರು ನಾನು ಗೆಲ್ಲದಂತೆ ಷಡ್ಯಂತ್ರ ಹೂಡಿದ್ದರು. ಮುಸ್ಲಿಂ ಸಮುದಾಯದ ಮುಖಂಡ ಬೆಳೆಯಬಾರದು ಎಂದು ಸೋಲಿಸಿದ್ದಾರೆ. ಈಗ ಪಕ್ಷದ ಸಭೆಗಳಿಗೂ ನನಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ, ಇದೆಲ್ಲವನ್ನು ನಾನು ಮನೆ ಮನೆಗೆ ಹೋಗಿ ಅರಿವು ಮೂಡಿಸುತ್ತೇನೆ. ಮೋಸದ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಇದರಿಂದ ದೊಡ್ಡ ರಾಜಕೀಯ ತಿರುವು ಆಗುತ್ತದೆ ಎಂದೆಲ್ಲ ಹೇಳಿ, ಅಚ್ಚರಿ ಮೂಡಿಸಿದ್ದಾರೆ.

ವೈರಲ್:

ಇಕ್ಬಾಲ್ ಅನ್ಸಾರಿ ಅವರ ಆಡಿಯೋ ಈಗ ವೈರಲ್ ಆಗಿದೆ. ಇದು ಕಾಂಗ್ರೆಸ್ಸಿನಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಇಕ್ಬಾಲ್ ಅನ್ಸಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್ ಪಾಳೆಯದಲ್ಲಿ ನಾನಾ ರೀತಿಯಲ್ಲಿ ಚರ್ಚೆಯಾಗುತ್ತಿದೆ.

ವಿಡಿಯೋ ವೈರಲ್:

ಕೊಪ್ಪಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಯರಡ್ಡಿ ತಮಾಷೆಗಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಆಡಿದ ಮಾತು ಈಗ ಮತ್ತೆ ವೈರಲ್ ಆಗಿದೆ. ಸಚಿವನಾಗಲು ಅಡ್ಡಿಯಾಗುತ್ತಾನೆ ಎಂದು ಆ ಇಕ್ಬಾಲ್ ಅನ್ಸಾರಿಯನ್ನು ಸೋಲಿಸಿಬಿಟ್ಟಿಯಲ್ಲೋ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಹೇಳಿದ್ದು ಮತ್ತೆ ವೈರಲ್ ಆಗಲು ಶುರುವಾಗಿದೆ.

ಕಾಂಗ್ರೆಸ್ಸಿನಲ್ಲಿ ಕೊತ ಕೊತ:

ಅನ್ಸಾರಿ ಮತ್ತು ಕೆಲವು ಮುಖಂಡರ ನಡುವೆ ನಡೆಯುತ್ತಿರುವ ಜಟಾಪಟಿ ಈಗ ಕಾಂಗ್ರೆಸ್‌ನಲ್ಲಿ ಕೊತ ಕೊತ ಕುದಿಯುವಂತೆ ಮಾಡಿದೆ. ಅನ್ಸಾರಿ ಸೋಲಿಗೆ ಕಾರಣವೇನು ಎನ್ನುವ ಕುರಿತು ಹೊತ್ತಿಗೆಯನ್ನೇ ತರಲಾಗುತ್ತದೆ ಎಂದು ಹನುಮಂತಪ್ಪ ಅರಸನಕೇರಿ ಹೇಳಿದ್ದು ಭಾರಿ ಚರ್ಚೆಗೂ ಕಾರಣವಾಗಿತ್ತು. ಇದಕ್ಕೂ ಇಕ್ಬಾಲ್ ಅನ್ಸಾರಿ ತಿರುಗೇಟು ನೀಡಿದ್ದರು.

ವಿಧಾನಸಭಾ ಚುನಾವಣೆ ಹೊತ್ತಲ್ಲಿ ಮುಖಂಡ ಹನುಮಂತಪ್ಪ ಅರಸನಕೇರಿ ನಿವಾಸಕ್ಕೆ ಗಾಲಿ ಜನಾರ್ದನ ರೆಡ್ಡಿ ಭೇಟಿ ಮಾಡಿದ್ದು ಮತ್ತು ಅವರನ್ನು ಸನ್ಮಾನಿಸಿದ್ದು ಭಾರಿ ಸುದ್ದಿಯಾಗಿತ್ತು. ಇದು ಹನುಮಂತಪ್ಪ ಅರಸನಕೇರಿ ಮತ್ತು ಅನ್ಸಾರಿ ನಡುವೆ ಜಟಾಪಟಿಗೂ ಕಾರಣವಾಗಿತ್ತು. ಇದನ್ನು ಚುನಾವಣೆ ಹೊತ್ತಲ್ಲಿ ಹೇಗೋ ತಣ್ಣಗೆ ಮಾಡಲಾಗಿತ್ತು. ಈಗ ಮತ್ತೆ ಸ್ಫೋಟಗೊಂಡಿದೆ. ಹೀಗಾಗಿ, ಅನ್ಸಾರಿ ಈಗ ತೊಡೆ ತಟ್ಟಿರುವಂತೆ ಕಾಣುತ್ತಿದ್ದು, ಸಿಡಿದೆದ್ದಿದ್ದಾರೆ.