ಹಾಲಿಗೆ ನೀರು ಬೆರೆಸುವ ಹಗರಣ, ನೇಮಕಾತಿಯಲ್ಲಿ ಭ್ರಷ್ಟಾಚಾರ, ಹಾಲಿನ ಪುಡಿಗೆ ಕಲಬೆರಕೆ ಪುಡಿ ಬೆರೆಸಿ 100 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದರೂ ಸಹ ಕಾನೂನು ಕ್ರಮ ಕೈಗೊಳ್ಳಲು ವಿಳಂಬವಾಗಿದೆ. ಈ ಪ್ರಕರಣದಲ್ಲಿ ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆ ಲೋಪ ಘನ ಘೋರ ಅಪರಾಧವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮನ್ಮುಲ್‌ನಲ್ಲಿ ನಡೆದಿರುವ ಅಕ್ರಮ, ಅವ್ಯವಹಾರಗಳನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸಚಿವರಿಗೆ ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಪತ್ರ ಚಳವಳಿ ನಡೆಸಿದರು.

ನಗರದ ಅಂಚೆ ಕಚೇರಿ ಬಳಿಸೇರಿದ ಕಾರ್ಯಕರ್ತರು, ಮನ್ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣ, ಹಾಲಿಗೆ ನೀರು ಬೆರೆಸಿದ ಪ್ರಕರಣ, ಮೆಗಾ ಡೇರಿಗೆ ಅಕ್ರಮ ನೇಮಕಾತಿ ಪ್ರಕರಣಗಳಲ್ಲಿ ಪಾಲುದಾರರಾಗಿರುವವರ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಮಂಡ್ಯ ಹಾಲು ಒಕ್ಕೂಟಕ್ಕೆ ಭವ್ಯ ಇತಿಹಾಸವಿದೆ. 80-90ರ ದಶಕದಲ್ಲಿ ಸ್ಥಾಪಿತಗೊಂಡ ಸಂಸ್ಥೆ ವಿಶ್ವ ಮಟ್ಟದಲ್ಲಿ ತನ್ನ ಉತ್ಪಾದಿಕ ಉತ್ಪನ್ನಗಳಿಗೆ ಹೆಸರು ಪಡೆದು ಪ್ರಸಿದ್ಧಿಯಾಗಿದೆ. ಹಾಲಿನ ಪುಡಿ, ಬೆಣ್ಣೆ ಮತ್ತು ತುಪ್ಪ ಪೇಡಾ ಸೇರಿದಂತೆ ಅನೇಕ ರೀತಿಯ ಉತ್ಪನ್ನಗಳು ಭಾರತೀಯ ಸೇನೆಗೆ ಸರಬರಾಜು ಹಾಗೂ ತಿರುಪತಿ ತಿಮ್ಮಪ್ಪನಿಗೆ ಲಡ್ಡು ತಯಾರಿಸಲು ತುಪ್ಪ ಒದಗಿಸುತ್ತಿರುವ ಕೀರ್ತಿ ಮನ್ಮುಲ್ ಗಿದೆ ಎಂದರು.

12 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಘನತೆ ಹೊಂದಿದ್ದು, ಆದರೆ, ಹಾಲಿಗೆ ನೀರು ಬೆರೆಸುವ ಹಗರಣ, ನೇಮಕಾತಿಯಲ್ಲಿ ಭ್ರಷ್ಟಾಚಾರ, ಹಾಲಿನ ಪುಡಿಗೆ ಕಲಬೆರಕೆ ಪುಡಿ ಬೆರೆಸಿ 100 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದರೂ ಸಹ ಕಾನೂನು ಕ್ರಮ ಕೈಗೊಳ್ಳಲು ವಿಳಂಬವಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ಈ ಪ್ರಕರಣದಲ್ಲಿ ಆಹಾರ ಸುರಕ್ಷತೆ ನಿರ್ವಹಣಾ ವ್ಯವಸ್ಥೆ ಲೋಪ ಘನ ಘೋರ ಅಪರಾಧವಾಗಿದೆ. ಇದಕ್ಕೆ ಕಾರಣಕರ್ತರನ್ನು ಕೂಡಲೇ ಕಾನೂನಿಗೆ ಒಳಪಡಿಸಿ ಸಿಬಿಐ ತನಿಖೆ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಒಕ್ಕೂಟಕ್ಕೆ ಆಗಿರುವ ನಷ್ಟ ತುಂಬಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್ ಮಾತನಾಡಿ, ತಾಯಂದಿರ ಬೆವರಿನ ಶ್ರಮ. ಹನಿ ಹನಿ ಹಾಲಿನ ಉತ್ಪಾದಕರ ಕ್ರಮವನ್ನು ಗೌರವಿಸುವ ಒಕ್ಕೂಟದ ಅಸ್ತಿತ್ವದ ಉಳಿವಿಗಾಗಿ ರೈತರು ಮತ್ತು ಉತ್ಪಾದಕರ ಹಿತ ಕಾಪಾಡಬೇಕಿದೆ. ಜಿಲ್ಲೆಯ ಜನತೆ ಮತ್ತು ಗೌರವವನ್ನು ಹಾಳು ಮಾಡುತ್ತಿರುವ ಅಪರಾಧಿಗಳಿಗೆ ತಕ್ಕ ಶಾಸ್ತಿ ಆಗುವಂತೆ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಯುವ ಘಟಕ ರಾಜ್ಯಾಧ್ಯಕ್ಷ ಮಳವಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಯುವ ಘಟಕ ಅಧ್ಯಕ್ಷ ವಿ.ಪಿ.ವಿಶ್ವಾಸ್, ಗೌರವಾಧ್ಯಕ್ಷ ವಿ.ಎಚ್.ಶಿವಲಿಂಗಯ್ಯ, ಪಟೇಲ್ ಹರೀಶ್, ಎಂ.ವೀರಪ್ಪ, ಸೋಂಪುರ ಉಮೇಶ್, ಕುಳ್ಳಪ್ಪ, ಬೋರಾಪುರ ಶೇಖರ್, ಸಿದ್ದರಾಮ, ದಿನೇಶ್, ಶಿವಲಿಂಗಯ್ಯ, ಕಲ್ಯಾಣಿ, ರಾಮಣ್ಣ, ಚೇತನ್ ಚಾಮನಹಳ್ಳಿ, ಅಣೆದೊಡ್ಡಿ ಮಹೇಂದ್ರ, ರೈತ ಮುಖಂಡ ಕುದುರಗಂಡಿ ನಾಗರಾಜು, ಗೆಜ್ಜಲಗೆರೆ, ವೀರಪ್ಪ ಚೆನ್ನೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.