ಈಗಾಗಲೇ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಭ್ರಷ್ಟಾಚಾರ ಸಾಬೀತಾದರೆ ಮಾತ್ರ ಸಿಒಡಿ ತನಿಖೆಗೆ ನೀಡಬಹುದು. ಸಂಸ್ಥೆಯಿಂದ ನಿರ್ಮಿಸಲಾಗಿರುವ ಹೊಸ ವಾಣಿಜ್ಯ ಮಳಿಗೆಗಳಲ್ಲಿ ನೀರು ಸೋರುತ್ತಿದ್ದು, ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಬಾಡಿಗೆ ಕಟ್ಟುವಂತೆ ಬಾಡಿಗೆದಾರರಿಗೆ ನೋಟಿಸ್ ನೀಡಿದ್ದಾರೆ. ಮೊದಲು ವಾಣಿಜ್ಯ ಮಳಿಗಳನ್ನು ಸರಿಪಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಟಿಎಪಿಸಿಎಂಎಸ್ ಸಂಸ್ಥೆಯಲ್ಲಿ ಕಳೆದ ಸಾಲಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಷೇರುದಾರರು ಒತ್ತಾಯಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ರೈತ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸೂಕ್ತ ತನಿಖೆಗಾಗಿ ಸಿಒಡಿಗೆ ವಹಿಸಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷ ಎಚ್.ಗಿರೀಶ್ ಮಾತನಾಡಿ, ಈಗಾಗಲೇ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಭ್ರಷ್ಟಾಚಾರ ಸಾಬೀತಾದರೆ ಮಾತ್ರ ಸಿಒಡಿ ತನಿಖೆಗೆ ನೀಡಬಹುದು ಎಂದು ಸಭೆಗೆ ತಿಳಿಸಿದರು.

ಸಂಸ್ಥೆಯಿಂದ ನಿರ್ಮಿಸಲಾಗಿರುವ ಹೊಸ ವಾಣಿಜ್ಯ ಮಳಿಗೆಗಳಲ್ಲಿ ನೀರು ಸೋರುತ್ತಿದ್ದು, ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಬಾಡಿಗೆ ಕಟ್ಟುವಂತೆ ಬಾಡಿಗೆದಾರರಿಗೆ ನೋಟಿಸ್ ನೀಡಿದ್ದಾರೆ. ಮೊದಲು ವಾಣಿಜ್ಯ ಮಳಿಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ನೌಕರರನ್ನು ಒಂದೇ ಶಾಖೆಯಲ್ಲಿ ಹೆಚ್ಚು ದಿನ ಕೆಲಸ ಮಾಡಲು ಬಿಟ್ಟರೆ ಭ್ರಷ್ಟಾಚಾರ ಹೆಚ್ಚುತ್ತದೆ. ಆದ್ದರಿಂದ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಬದಲಾವಣೆ ಮಾಡಬೇಕು. ಸಂಘದ ಪೆಟ್ರೂಲ್ ಬಂಕ್‌ನಲ್ಲಿ ಸಾಲ ನೀಡುವುದನ್ನು ಸ್ಥಗಿತಗೊಳಿಸಿ ಹೆಚ್ಚು ಪೆಟ್ರೋಲ್, ಡಿಸೀಲ್ ಮಾರಾಟಕ್ಕೆ ಕ್ರಮ ವಹಿಸಬೇಕು. ಸಂಸ್ಥೆಯ ಕಲ್ಯಾಣ ಮಂಟಪವನ್ನು ರಿಪೇರಿ ಮಾಡಿಸಬೇಕು ಅಥವಾ ಹೊಸದಾಗಿ ನಿರ್ಮಿಸಬೇಕು. ರೈಸ್‌ಮಿಲ್‌ ಹೊಸಗಾಗಿ ನಿರ್ಮಿಸಿ ಎಂದು ಷೇರುದಾರರು ಎಂದು ಒತ್ತಾಯಿಸಿದರು.

ಈ ವೇಳೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ, ಟಿಎಪಿಸಿಎಂಎಸ್ ನಿರ್ದೇಶಕ ವಡ್ಡರಹಳ್ಳಿ ನಿಂಗೇಗೌಡರನ್ನು ಅಭಿನಂದಿಸಲಾಯಿತು. ಅಧ್ಯಕ್ಷ ಎಚ್.ಗಿರೀಶ್ ಮಾತನಾಡಿ, ಸಂಸ್ಥೆ ಈ ಸಾಲಿನಲ್ಲಿ 10.99ಲಕ್ಷ ರು.ನಿವ್ವಳ ಲಾಭಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿಯೂ ಲಾಭದಾಯವಾಗಿ ನಡೆಸಲು ಕೆಲಸ ಮಾಡುತ್ತೇವೆ ಎಂದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ವಿಜೇಂದ್ರಮೂರ್ತಿ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಪ್ರೇಮಪುಟ್ಟೇಗೌಡ, ನಿರ್ದೇಶಕರಾದ ವಿ.ಎಸ್.ನಿಂಗೇಗೌಡ, ಎಂ.ಸ್ವಾಮಿ, ಸಿ.ಎಂ.ಕಿರಣ್‌ಕುಮಾರ್, ಎಚ್.ಎನ್.ಚಿಟ್ಟಿಬಾಬು, ಪಿ.ಎಲ್.ಆದರ್ಶ, ಎ.ಕೃಷ್ಣ, ಸುನಂದಮ್ಮ, ನರಸಿಂಹನಾಯಕ, ಟಿ.ಎಸ್.ಹಾಳಯ್ಯ, ನಾಮಿನಿ ನಿರ್ದೇಶಕ ಎಚ್.ಇ.ರವಿಕುಮಾರ್, ಬ್ಯಾಂಕ್ ನಾಮಿನಿ ಎ.ವಿಜೇಂದ್ರಮೂರ್ತಿ, ಪ್ರಧಾನ ಕಾರ್‍ಯದರ್ಶಿ ಎಚ್.ಬಿ.ಭರತ್‌ಕುಮಾರ್, ನವೀನ್‌ಕುಮಾರ್ ಇದ್ದರು.