ಮಂಡ್ಯ ಜಿಲ್ಲೆಯಲ್ಲಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಅವ್ಯವಹಾರ ಕುರಿತು ತನಿಖೆಗೆ ತಂಡ ರಚಿಸಲಾಗಿದೆ. ಯೋಜನೆಯಲ್ಲಿ ತಪ್ಪು ಎಷ್ಟಾಗಿದೆ. ಕಾನೂನು ಬಾಹಿರವಾಗಿ ಅವ್ಯವಹಾರ ನಡೆದಿದೆಯೇ ಎಂಬುದರ ಬಗ್ಗೆ ತಂಡ ತನಿಖೆ ನಡೆಸುತ್ತಿದೆ. ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಮದ್ದೂರು
ಜಲಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಸಾಕಷ್ಟು ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ತಂಡ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕು ಕೊಪ್ಪ ಹೋಬಳಿ ಕೀಳಘಟ್ಟ ಮತ್ತು ಆಬಲವಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಜೆಎಂ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಅವ್ಯವಹಾರ ಕುರಿತು ತನಿಖೆಗೆ ತಂಡ ರಚಿಸಲಾಗಿದೆ. ಯೋಜನೆಯಲ್ಲಿ ತಪ್ಪು ಎಷ್ಟಾಗಿದೆ. ಕಾನೂನು ಬಾಹಿರವಾಗಿ ಅವ್ಯವಹಾರ ನಡೆದಿದೆಯೇ ಎಂಬುದರ ಬಗ್ಗೆ ತಂಡ ತನಿಖೆ ನಡೆಸುತ್ತಿದೆ. ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಬೇಸಿಗೆಯಲ್ಲಿ ಮುನ್ನೆಚ್ಚರಿಕೆಯಾಗಿ ರಾಸುಗಳಿಗೆ ಮೇವು, ಜನರಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ನೀರಾವರಿಗೆ ಡ್ಯಾಂಗಳಲ್ಲಿ ನೀರಿದೆ. ಬೆಳೆಗಳು, ಕುಡಿಯುವ ನೀರಲು ಕೊರತೆ ಇಲ್ಲ. ಬೇಸಿಗೆಯಲ್ಲಿ ನೀರು ಕಾಲುವೆಗಳಲ್ಲಿ ಹರಿಯವುದು ವಿಳಂಬವಾಗುತ್ತದೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದರು.
ನಾಗಮಂಗಲದಲ್ಲಿ ನಾಲ್ಕೈದು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಮೊನ್ನೆ ಸಭೆ ನಡೆಸಿ ಡೀಸಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಕೊಪ್ಪ ಹೋಬಳಿಯಲ್ಲಿ ಯಾವುದೇ ನೀರಿನ ಸಮಸ್ಯೆ ಬಗ್ಗೆ ವರದಿಯಾಗಿಲ್ಲ. ಆದರೆ, ಎಚ್ಚರಿಕೆ ವಹಿಸುತ್ತೇವೆ ಎಂದರು.ಎಪಿಎಂಸಿಗೆ ರಾಗಿ ಸರಬರಾಜು ಮಾಡಿ ತಿಂಗಳಾದರೂ ರೈತರಿಗೆ ಹಣ ನೀಡದಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು,
ಕೇಂದ್ರ ಸರ್ಕಾರದಿಂದ 2500 ಕೋಟಿ ಬರಬೇಕಿತ್ತು. ಮೊನ್ನೆ ದಿನ 1200 ಕೋಟಿ ರು. ಬಂದಿದೆ. ಏಪ್ರಿಲ್ 1ರ ವೇಳೆ ರೈತರಿಗೆ ದುಡ್ಡು ಬರಲಿದೆ ಎಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿ ಗೌಡ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್ .ದಿವಾಕರ್, ತಾಪಂ ಮಾಜಿ ಉಪಾಧ್ಯಕ್ಷರಾದ ಬಿ.ಎಂ.ರಘು, ರಾಮಚಂದ್ರ, ಸದಸ್ಯ ತೊಯಜಾಕ್ಷ, ಗ್ರಾಪಂ ಮಾಜಿ ಅಧ್ಯಕ್ಷ ವಿಜಯ್, ಮಾಜಿ ಸದಸ್ಯ ಕುಮಾರ್ ಕೊಪ್ಪ, ಗ್ರಾಮದ ಮುಖಂಡರು ಇದ್ದರು.ಶ್ರೀದೈತಮ್ಮದೇವಿ ಉತ್ಸವ ಮೂರ್ತಿಗೆ ಸಚಿವರಿಂದ ಪೂಜೆ ಸಲ್ಲಿಕೆ
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಗಂಡುನಿಂಗಿಕೊಪ್ಪಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀದೈತಮ್ಮದೇವಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪಾಲ್ಗೊಂಡು ದೇವಿಗೆ ಭಕ್ತಿನಮನ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆಯುತ್ತಿದ್ದ ಶ್ರೀದೈತಮ್ಮದೇವಿ ಉತ್ಸವ ಮೂರ್ತಿ ಮೆರವಣಿಗೆ ವೇಳೆ ಭೇಟಿಕೊಟ್ಟ ಸಚಿವರು, ದೇವಿಯ ಉತ್ಸವ ಮೂರ್ತಿಗೆ ಹೆಗಲು ಕೊಟ್ಟು ಕೆಲದೂರ ಮೆರವಣಿಗೆಯಲ್ಲಿ ಸಾಗುವ ಮೂಲಕ ತಮ್ಮ ಭಕ್ತಿಭಾವ ಸಮರ್ಪಿಸಿದರು.ನಂತರ ಮಾತನಾಡಿದ ಸಚಿವರು, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕೂಡ ನಮ್ಮ ಪೂರ್ವಿಕರು ನಡೆಸುತ್ತಿದ್ದ ಹಬ್ಬ ಹರಿದಿನ ದೇವರ ಕಾರ್ಯಗಳನ್ನು ಬಹಳ ವಿಜೃಂಭಣೆಯಿಂದ ನಡೆಸುವ ಮೂಲಕ ಗ್ರಾಮೀಣ ಸೊಗಡಿನ ಸಂಸ್ಕೃತಿ ಪರಂಪರೆ ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಈ ಬಾರಿ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ. ಜನ ಜಾನುವಾರುಗಳ ಕುಡಿಯುವ ನೀರಿಗೆ ಸಮಸ್ಯೆ ಬಾರದಿರಲಿ. ನಾಡಿನ ಎಲ್ಲ ಜನರು ಆರೋಗ್ಯವಂತರಾಗಿ ಶಾಂತಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ದೇವಿಯನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ಬೆಂಗಳೂರು ನಿವಾಸಿಗಳು ಇದ್ದರು.