ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಸ ಹಾಗೂ ತ್ಯಾಜ್ಯ ವರ್ಗಾವಣೆ ಸ್ಟೇಷನ್‌ಗಳ ಟೆಂಡರ್‌ನಲ್ಲಿ ಹಗರಣ ನಡೆದಿದೆ. ಟೆಂಡರ್‌ ನಿಯಮಗಳನ್ನು ಗಾಳಿ ತೂರಿ ಅನರ್ಹ ಕಂಪನಿಗೆ ಟೆಂಡರ್‌ ನೀಡಿ ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಸ ಹಾಗೂ ತ್ಯಾಜ್ಯ ವರ್ಗಾವಣೆ ಸ್ಟೇಷನ್‌ಗಳ ಟೆಂಡರ್‌ನಲ್ಲಿ ಹಗರಣ ನಡೆದಿದೆ. ಟೆಂಡರ್‌ ನಿಯಮಗಳನ್ನು ಗಾಳಿ ತೂರಿ ಅನರ್ಹ ಕಂಪನಿಗೆ ಟೆಂಡರ್‌ ನೀಡಿ ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. 133 ಕೋಟಿ ರು. ಮೊತ್ತದ ಟೆಂಡರ್‌ನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ ಎಂಬ ಕಂಪನಿಗೆ ನೀಡಲಾಗಿದೆ ಎಂದು ದೂರಿದರು.

ಜಿಎಸ್‌ಟಿ ಸಂಖ್ಯೆ ಇಲ್ಲದ ಬೇನಾಮಿ ಕಂಪನಿ:

ಮುನಿಯಪ್ಪ ಎಂಟರ್‌ಪ್ರೈಸಸ್‌ ಜಿಎಸ್‌ಟಿ ಸಂಖ್ಯೆ ಇಲ್ಲದ ಈ ಕಂಪನಿ ಬೇನಾಮಿಯಾಗಿದೆ. ಟೆಂಡರ್‌ ಪಡೆಯಲು 10 ಕೋಟಿ ರು. ವಾರ್ಷಿಕ ವಹಿವಾಟು ಇರಬೇಕು ಎಂಬ ನಿಯಮ ಇದೆ. ಆದರೆ, ಈ ಕಂಪನಿ 2023-24 ರಲ್ಲಿ 3.34 ಕೋಟಿ ರು. ಮಾತ್ರ ವಾರ್ಷಿಕ ವಹಿವಾಟು ನಡೆಸಿದೆ. ಶೇ.40ರಷ್ಟು ಕಮಿಷನ್‌ಗಾಗಿ ಅರ್ಹತಾ ಷರತ್ತು ಉಲ್ಲಂಘಿಸಿ, ಹೆಚ್ಚುವರಿ ಭದ್ರತಾ ಠೇವಣಿ ಪಡೆಯದೆ ಈ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಆರ್ಥಿಕ ಇಲಾಖೆ ಎಚ್ಚರಿಕೆ ನಡುವೆಯೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಕಾರ್ಯಾದೇಶ ನೀಡಿದೆ ಎಂದು ಆರೋಪಿಸಿದರು.

ಹೆಚ್ಚುವರಿ ಠೇವಣಿ ಮನ್ನಾ:

ಈ ಕಂಪನಿ ಸರ್ಕಾರದ ಅಳಿಯನಾ? ಪ್ಯಾಕೇಜ್‌ 2 ರಲ್ಲಿ 55.04 ಕೋಟಿ ರು. ಅಂದಾಜು ವೆಚ್ಚವಾಗಿದ್ದು, ಹೆಚ್ಚುವರಿ ಠೇವಣಿ 6.79 ಕೋಟಿ ರು. ಪಾವತಿಸಬೇಕಿತ್ತು. ಆದರೆ ಅದನ್ನು ಮನ್ನಾ ಮಾಡಲಾಗಿದೆ. ಪ್ಯಾಕೇಜ್‌ 5 ರಲ್ಲಿ 5.99 ಕೋಟಿ ರು. ಹೆಚ್ಚುವರಿ ಭದ್ರತಾ ಠೇವಣಿ ಕಟ್ಟಿಲ್ಲ. ಒಟ್ಟು 12.99 ಕೋಟಿ ರು. ಭದ್ರತಾ ಠೇವಣಿ ಪಡೆದಿಲ್ಲ. ಆರ್ಥಿಕ ಇಲಾಖೆ ಸೂಚನೆ ಗಾಳಿಗೆ ತೂರಿ ಮುನಿಯಪ್ಪ ಕಂಪನಿಗೆ ಅನುಕೂಲ ಮಾಡಿಕೊಟ್ಟು ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಆರ್‌.ಅಶೋಕ್‌ ಆಪಾದಿಸಿದರು.

ಕಸದ ಸ್ಟೇಷನ್‌ಗಳಿಗೆ ಜಾಗ ಹುಡುಕದೇ ಟೆಂಡರ್‌:

ಕಸದ ಸ್ಟೇಷನ್‌ಗಳಿಗೆ ಮೊದಲು ಜಾಗ ಹುಡುಕಬೇಕಿತ್ತು. ಜಾಗ ಗುರುತಿಸದೆ ಒಟ್ಟು 21 ಪ್ಯಾಕೇಜ್‌ಗಳ ಟೆಂಡರ್‌ ಮಾಡಲಾಗಿದೆ. ಆದಷ್ಟು ಬೇಗ ಕಮಿಷನ್‌ ಹೊಡೆಯಲು ತರಾತುರಿಯಲ್ಲಿ ಟೆಂಡರ್‌ ರೂಪಿಸಲಾಗಿದೆ. ಇದನ್ನು ಉನ್ನತ ಮಟ್ಟದ ತನಿಖೆಗೆ ಅಥವಾ ಲೋಕಾಯುಕ್ತಕ್ಕೆ ನೀಡಿ ತನಿಖೆ ಮಾಡಿಸಬೇಕು. ಈ ಟೆಂಡರ್‌ನ ಪ್ಯಾಕೇಜ್‌ 2 ಮತ್ತು 5 ಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಕೂಡಲೇ ಸೀಜ್‌ ಮಾಡಬೇಕು ಎಂದು ಆಗ್ರಹಿಸಿದರು.

ಟೆಂಡರ್ ರದ್ದಿಗೆ ಆಗ್ರಹಿಸಿ ಸಿಎಂಗೆ ಪತ್ರ:

ಈ ಕುರಿತು ನಾನು ಮುಖ್ಯಮಂತ್ರಿಗೆ ಪತ್ರ ಬರೆದು ಟೆಂಡರ್‌ ರದ್ದು ಮಾಡಲು ಆಗ್ರಹಿಸುತ್ತೇನೆ. ರದ್ದು ಮಾಡದಿದ್ದರೆ ಇದರಲ್ಲಿ ಮುಖ್ಯಮಂತ್ರಿಗೂ ಪಾಲಿದೆ ಎಂಬುದು ದೃಢವಾಗುತ್ತದೆ. ಈ ಹಿಂದೆ ಮುಖ್ಯಮಂತ್ರಿ ಕೂಡ ಇದು ಬೋಗಸ್‌ ಎಂದು ಹೇಳಿದ್ದಾರೆ. ಆದರೂ ಟೆಂಡರ್‌ ನೀಡಲಾಗಿದೆ. ಈ ಟೆಂಡರ್‌ ಹಗರಣ ಸಂಬಂಧ ಲೋಕಾಯುಕ್ತ ತನಿಖೆ ಆಗಬೇಕು. ಆದರೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಯಾವುದಕ್ಕೂ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಸದ ಟೆಂಡರ್‌ ಹಗರಣದಲ್ಲಿ ಬೆಂಗಳೂರಿನ ಸಚಿವರೊಬ್ಬರ ಪಾತ್ರವಿದೆ. ಅವರ ಹೆಸರನ್ನು ಮುಂದೆ ಬಹಿರಂಗಪಡಿಸುವೆ. ಕಸದ ವಿಲೇವಾರಿ ವಿಚಾರದಲ್ಲಿ ಬಹಳ ಟೆಂಡರ್‌ಗಳಾಗಿದ್ದು, ಮುಂದೆ ದಾಖಲೆ ಬಿಡುಗಡೆ ಮಾಡುವೆ

-ಆರ್‌.ಅಶೋಕ್‌, ವಿರೋಧ ಪಕ್ಷದ ನಾಯಕ