ಸಾರಾಂಶ
ಕರ್ನಾಟಕ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ನಿರ್ದೇಶಕಿ ವಿ.ಸುಮಂಗಲ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.
ಬೆಂಗಳೂರು : ಶಿಕ್ಷಕರ ತರಬೇತಿ ಸಂಸ್ಥೆಗಳು ಹಾಗೂ ವಿವಿಧ ಕಚೇರಿಗಳಲ್ಲಿನ ಅನುಪಯುಕ್ತ ಇ-ತ್ಯಾಜ್ಯ ವಸ್ತುಗಳ ಸಂಗ್ರಹ ಮತ್ತು ವಿಲೇಯಲ್ಲಿ ಟೆಂಟರ್ ನಿಯಮ ಉಲ್ಲಂಘಿಸಿ ಅರ್ಹವಲ್ಲದ ಸಂಸ್ಥೆಯೊಂದಕ್ಕೆ ಕಾರ್ಯಾದೇಶ ನೀಡಿರುವುದು ಸಾಬೀತಾಗಿರುವುದರಿಂದ ಕರ್ನಾಟಕ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ನಿರ್ದೇಶಕಿ ವಿ.ಸುಮಂಗಲ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.
ಡಿಎಸ್‌ಇಆರ್‌ಟಿಯಿಂದ ಇ-ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇ ಮಾಡುವ ಟೆಂಡರ್‌ನ ಕಾರ್ಯಾದೇಶ ನೀಡಿರುವ ಎಂ/ಎಸ್ ಇ-ಪ್ರಗತಿ ರೀಸೈಕಲ್ ಪ್ರೈ.ಲಿ. ಸಂಸ್ಥೆಗೆ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಇಲ್ಲದಿದ್ದರೂ ಎಲ್1 ಎಂದು ಪರಿಗಣಿಸಿ ಕಾರ್ಯಾದೇಶ ನೀಡಿರುವುದು. ಸಂಸ್ಥೆಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಪ್ರಮಾಣ ಪತ್ರಗಳನ್ನು ಹೊಂದಿಲ್ಲದಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಜೊತೆತೆ ಆ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಟೆಂಡರ್‌ನಲ್ಲಿ ರೀಸೈಕ್ಲಿಂಗ್ ಸಾಮರ್ಥ್ಯವನ್ನು 1400 ಎಂಟಿಎಸ್‌ನಿಂದ 1206 ಎಂಟಿಎಸ್‌ಗೆ ತಿದ್ದುಪಡಿ ಮಾಡಿರುವುದು. ಇದರಿಂದ ಕಳೆದ ಬಾರಿಗಿಂತ ಸರ್ಕಾರದ ಬೊಕ್ಕಸಕ್ಕೆ ಈ ಬಾರಿ 1.62 ಕೋಟಿ ರು. ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿತ್ತು. ಇದರಿಂದ ಇಲಾಖಾ ಆಯುಕ್ತರು ಪ್ರಕರಣದ ಸಮಗ್ರ ತನಿಖೆಯನ್ನು ಮುಖ್ಯಲೆಕ್ಕಾಧಿಕಾರಿಗೆ ವಹಿಸಿದ್ದರು.
ಈ ತನಿಖೆಯಲ್ಲೂ ಟೆಂಟರ್ ನಿಯಮ ಉಲ್ಲಂಘನೆ, ಅರ್ಹವಲ್ಲದ ಸಂಸ್ಥೆಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ತಿದ್ದುಪಡಿ ಮಾಡಿರುವುದು, ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವುಂಟು ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಡಿಎಸ್‌ಇಆರ್‌ಟಿ ನಿರ್ದೇಶಕರಾದ ವಿ.ಸುಮಂಗಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಮಾಡಿದೆ.