ಭೂ ಮಂಜೂರಾತಿಯಲ್ಲಿ ಅಕ್ರಮ: ಪ್ರಕರಣ ದಾಖಲೆಗೆ ರೈತ ಸಂಘ ಆಗ್ರಹ

| Published : May 18 2024, 12:35 AM IST

ಭೂ ಮಂಜೂರಾತಿಯಲ್ಲಿ ಅಕ್ರಮ: ಪ್ರಕರಣ ದಾಖಲೆಗೆ ರೈತ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

Government instructed to take action against 95 employees. Dharani satyagraha if neglected

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು:

ಭೂ ಮಂಜೂರಾತಿ ಅಕ್ರಮದಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಮೇಲೆ ತಕ್ಷಣ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ, 15 ದಿನಗಳ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣದ ತನಿಖೆಗೆ 16 ಜನ ತಹಸೀಲ್ದಾರ್‌ರನ್ನು ಕಳುಹಿಸಿ, ತನಿಖೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, 95 ಜನ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರ್ಗ ಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕಡೂರು ತಾಲೂಕು ತಹಸೀಲ್ದಾರಾಗಿದ್ದ ಜೆ.ಉಮೇಶ್ ವಿರುದ್ಧ ಉಳ್ಳಿ ನಾಗರು ಜಮೀನು ಅಕ್ರಮ ಖಾತೆ ಬದಲಾವಣೆ ಸಂಬಂಧ ತರೀಕೆರೆ ಉಪ ವಿಭಾಗಾಧಿಕಾರಿಗಳು ಸಮಗ್ರ ತನಿಖೆ ನಡೆಸಿ 324 ಅಕ್ರಮ ಭೂ ಮಂಜೂರಾತಿ ಮಾಡಿರುವ ಹಗರಣವನ್ನು ಪತ್ತೆ ಹಚ್ಚಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಉಮೇಶ್ ಅವರಿಗೆ ಈಗ ಉಪ ವಿಭಾಗಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದ್ದು, ಕೂಡಲೇ ಹಿಂಬಡ್ತಿ ನೀಡಬೇಕೆಂದು ಒತ್ತಾಯಿಸಿದರು.

ಕಡೂರು ಕಸಬಾ ಹೋಬಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಮಂಜುನಾಥ ಅವರ ವಿರುದ್ಧ ಹಳ್ಳಿಕೆರೆ ಕಾವಲು ಭೂಮಿಯಲ್ಲಿ 1200 ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಈ ವ್ಯಕ್ತಿಯನ್ನು ಕಡೂರು ಕ್ಷೇತ್ರದ ಶಾಸಕರು ಆಪ್ತ ಸಹಾಯಕರಾಗಿ ನೇಮಕ ಮಾಡಿಕೊಂಡಿರುವುದು ಸರಿಯಲ್ಲ. ಕೂಡಲೆ ಅವರನ್ನು ಆಪ್ತ ಸಹಾಯಕರ ಸ್ಥಾನದಿಂದ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಅಕ್ರಮ ಭೂ ಹಗರಣದಲ್ಲಿ ಗುರುತಿಸಲಾಗಿರುವ ಅಧಿಕಾರಿಗಳ ವಿರುದ್ಧ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕಡೂರು ತಾಲೂಕು ಅಧ್ಯಕ್ಷ ಕೆ.ಟಿ. ಆನಂದ್, ತಾಲೂಕು ಗೌರವಾಧ್ಯಕ್ಷ ಮಲ್ಲುಂಡಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ಉಮೇಶ್, ಮುಖಂಡರಾದ ಬಸವರಾಜ್, ದರ್ಶನ್ ಇದ್ದರು.