ನರೇಗಾ ಯೋಜನೆಯಲ್ಲಿ ಅಕ್ರಮ: ತನಿಖೆಗೆ ಕರವೇ ಆಗ್ರಹ

| Published : Feb 11 2024, 01:51 AM IST

ಸಾರಾಂಶ

ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡದೆ ಸಂಬಂಧಪಟ್ಟ ಅಧಿಕಾರಿಗಳೇ ಮನಬಂದಂತೆ ಕಾಮಗಾರಿ ರಚಿಸಿ ಸಂಪೂರ್ಣ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕರ್ತು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ತಾಲೂಕಿನಲ್ಲಿ ಬರುವ ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ಸಮಗ್ರವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ನಗರದ ಜಿಲ್ಲಾ ಪಂಚಾಯ್ತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಜಿಪಂ ಸಿಇಓ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರವೇ ಯಾದಗಿರಿ ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ, ಯಾದಗಿರಿ ತಾಲೂಕಿನಲ್ಲಿ ಬರುವ ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಕೂಲಿ ಕೆಲಸ ನೀಡದೆ ಸಂಬಂಧಪಟ್ಟ ಅಧಿಕಾರಿಗಳೇ ಮನಬಂದಂತೆ ಕಾಮಗಾರಿ ರಚಿಸಿ ಸಂಪೂರ್ಣ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ನಿಯಮದನ್ವಯ ಅಂದಾಜು ಪತ್ರಿಕೆ ಪ್ರಕಾರ ಕಾಮಗಾರಿ ಮಾಡದೆ ಹಾಗೂ ಕಾಮಗಾರಿಗೆ ಸಂಬಂಧಪಟ್ಟಂತೆ ಸಾಮಗ್ರಿ ಅನುದಾನದ ಕಾಮಗಾರಿ ತಮಗೆ ಬೇಕಿದ್ದ ಗುತ್ತಿಗೆದಾರರೊಂದಿಗೆ ಗ್ರಾಪಂ ಪಿಡಿಓ ಹಾಗೂ ಸಹಾಯಕ ಅಭಿಯಂತರರು ಮತ್ತು ಗ್ರಾಪಂ ಅಧ್ಯಕ್ಷರುಗಳು ಶಾಮೀಲಾಗಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ಯೋಜನೆಯು ಗ್ರಾಮಸ್ಥರಿಗೆ ಕೆಲಸ ನೀಡಿ ಗುಳೆ ತಪ್ಪಿಸಲು ರೂಪಿಸಲಾದ ಯೋಜನೆ ಇದಾಗಿದ್ದು, ಈ ಯೋಜನೆಯ ಸಂಪೂರ್ಣ ಅನುದಾನವು ಇಂತಹ ಭ್ರಷ್ಟ ಅಧಿಕಾರಿಗಳ ಪಾಲಾಗುತ್ತಿದೆಂದು ಆಕ್ರೋಶ ವ್ಯಕ್ತಪಡಿಸಿದರು.

ಅರಿಕೇರಾ (ಬಿ) ಗ್ರಾಪಂ ವ್ಯಾಪ್ತಿಯ ಕಾನಳ್ಳಿ ಕೆರಿ ತಾಂಡಾ ಕಿರಿಯ ಪ್ರಾಥಮಿಕ ಶಾಲೆ ಕಂಪೌಂಡ್‌ ನಿರ್ಮಾಣ ಕಾಮಗಾರಿಯು ಯಾವುದೇ ರೀತಿಯ ಬುನಾದಿ ಇಲ್ಲದೆ, ಕಂಪೌಂಡ್‌ ನಿರ್ಮಾಣ ಮಾಡಿರುತ್ತಾರೆ. ಈ ಬಗ್ಗೆ ವಿಚಾರಿಸಿದಾಗ ಸಹಾಯಕ ಅಭಿಯಂತರರು ಈ ಕಾಮಗಾರಿ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ಹೇಳಿತ್ತಿದ್ದಾರೆಂದು ದೂರಿದ್ದಾರೆ. ಇದಲ್ಲದೆ ತಾಲೂಕಿನಾದ್ಯಂತ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿರುತ್ತದೆ. ಶೀಘ್ರ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಇಂತಹ ಭ್ರಷ್ಟರಿಂದ ಗ್ರಾಮಸ್ಥರಿಗೆ ಯಾವುದೇ ಕೆಲಸವಿಲ್ಲದೆ ಗುಳೆ ಹೋಗುವುದು ನಿರಂತರವಾಗಿದೆ. ಆದ ಕಾರಣ ಈ ಕೂಡಲೇ 2023-24ರವರೆಗೆ ನಡೆದ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆಗೆ ವಿಶೇಷ ತಂಡ ರಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ವಿಳಂಬವಾದರೆ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಸಲೀಂ ಯರಗೋಳ, ಸುರೇಶ ಬೆಳಗುಂದಿ, ನಾಗಪ್ಪ ಗೋಪಾಳಪೂರ, ಮಹೇಶ ಠಾಣಗುಂದಿ, ಸಾಬಣ್ಣಗೌಡ ಯರಗೋಳ, ಮಲ್ಲಪ್ಪ ಯರಗೋಳ, ಹುಲಿಗೆಪ್ಪ ಬಜಂತ್ರಿ, ರಮೇಶ ನಾಯಕ ಇತರರಿದ್ದರು.