ಆಸ್ತಿ ತೆರಿಗೆ ಹೆಚ್ಚಳದಲ್ಲಿ ಅವ್ಯವಹಾರ, ಸಿಐಡಿ ತನಿಖೆಯಾಗಲಿ

| Published : Jun 21 2024, 01:06 AM IST

ಸಾರಾಂಶ

ಬೆಳಗಾವಿ ಮಹಾನಗರ ಆಸ್ತಿ ತೆರಿಗೆ ಹೆಚ್ಚಳದಲ್ಲಿ ಅವ್ಯವಹಾರ, ಸಿಐಡಿ ತನಿಖೆಯಾಗಲಿ ಎಂದು ಪಾಲಿಕೆ ಸಾಮಾನ್ಯಸಭೆಯಲ್ಲಿ ಶಾಸಕ ಅಭಯ ಪಾಟೀಲ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಲಾಗುತ್ತಿದ್ದು, ಈ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸಿಐಡಿ ತನಿಖೆ ನಡೆಸಬೇಕು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಆಗ್ರಹಿಸಿದರು.

ಮೇಯರ್‌ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಆಸ್ತಿ ತೆರಿಗೆ ವಿಷಯ ಪ್ರಸ್ತಾಪಿಸಿದ ಅವರು, ಆಸ್ತಿ ತೆರಿಗೆ ಹೆಚ್ಚಳ ಎನ್ನುವುದು ಬೆಳಗಾವಿಯಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ₹1 ಲಕ್ಷ ಇದ್ದವರಿಗೆ ₹20 ಲಕ್ಷ, ₹2 ಲಕ್ಷ ಇದ್ದರೆ ₹40 ಲಕ್ಷ ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ. ಈ ತೆರಿಗೆ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಐಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಎಲ್ಲ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು. ತೆರಿಗೆ ಹೆಚ್ಚಳ ಸಮಸ್ಯೆ ಇಡೀ ಬೆಳಗಾವಿ ನಾಗರಿಕರ ಸಮಸ್ಯೆಯಾಗಿದೆ. ಇದು ಸೂಕ್ಷ್ಮ ವಿಚಾರವೂ ಆಗಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಾಕಿತು ಮಾಡಿದರು.

ಬೆಳಗಾವಿ ನಗರದಲ್ಲಿ ಅಭಿವೃದ್ಧಿ ಕಾರಣ ಹೇಳಿ ರಸ್ತೆಗಳನ್ನು ಬೇಕಾಬಿಟ್ಟಿಯಾಗಿ ಅಗೆಯಲಾಗುತ್ತಿದೆ. ಕೂಡಲೇ ಅಗೆದ ರಸ್ತೆಗಳನ್ನು ದುರಸ್ತಿ ಮಾಡದಿದ್ದರೇ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಜನರೆ ಕಟ್ಟಿ ಹಾಕುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆಯ ಕಚೇರಿಯಲ್ಲಿನ ಕಂಪ್ಯೂಟರ್‌ ಕಳ್ಳತನ ಪ್ರಕರಣವನ್ನು ಗಂಭೀರವಾಗಿದ್ದು, ಈಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು. ನಗರದಲ್ಲಿ ಯುಜಿ ಕೇಬಲ್‌ ಇದ್ದರೂ ಕೆಲ ಖಾಸಗಿ ಕಂಪನಿಗಳು ಎಲ್ಲೆಂದರಲ್ಲಿ ಅನುಮತಿ ಪಡೆಯದೇ ಕೇಬಲ್‌ ಹಾಕುತ್ತಿದ್ದು, ಅವು ಜೋತು ಬಿದ್ದಿರುತ್ತವೆ. ಅಂತಹ ಕಂಪನಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ತಿಳಿಸಿದರು.

----------ಮೇಯರ್‌ಗೆ ಪಾಲಿಕೆ ಸದಸ್ಯರ ಅಭಿನಂದನೆಆಸ್ತಿ ತೆರಿಗೆ ಪಾವತಿಗೆ ಶೇ.5 ರಷ್ಟು ರಿಯಾಯತಿ ದಿನಾಂಕವನ್ನು ಜುಲೈ 30ರವೆಗೆ ವಿಸ್ತರಣೆ ಮಾಡುವಲ್ಲಿ ಶ್ರಮಿಸಿದ ಮೇಯರ್‌ಗೆ ಪಾಲಿಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು.

ರಾಜಶೇಖರ ಡೋಣಿ ಮಾತನಾಡಿ, ಪಾಲಿಕೆ ಸಾಪ್ಟವೇರ್‌ 20 ದಿನ ಬಂದ್‌ ಆಗಿತ್ತು. ಹಾಗಾಗಿ, ಶೇ.5 ರಷ್ಟು ರಿಯಾಯತಿಯಿಂದ ನಗರದ ನಾಗರಿಕರು ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಶೇ.5 ರಷ್ಟು ರಿಯಾಯತಿ ಸೌಲಭ್ಯವನ್ನು ವಿಸ್ತರಿಸುವಂತೆ ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿ,ಸರ್ಕಾರ ಜುಲೈ 30ರವೆಗೆ ಅವಧಿ ವಿಸ್ತರಿಸಿರುವುದು ಅಭಿನಂದನಾರ್ಹ ಎಂದರು.

ಹನುಮಂತ ಕೊಂಗಾಲಿ ಮಾತನಾಡಿ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಪ್ಟವೇರ್‌ ಸ್ಥಗಿತಗೊಂಡಿದ್ದರಿಂದ ಶೇ.5ರ ರಿಯಾಯತಿಯಿಂದ ನಾಗರಿಕರು ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಅವಧಿ ವಿಸ್ತರಿಸುವಂತೆ ನಮ್ಮ ಮನವಿಗೆ ಸ್ಪಂದಿಸಿ, ಸರ್ಕಾರ ಜು.30 ರವರೆಗೆ ಅವಧಿ ವಿಸ್ತರಿಸಿದೆ. ಇದರಿಂದಾಗಿ ನಾಗರಿಕರು ತುಂಬಾ ಅನುಕೂಲವಾಗಿದೆ. ಮೇಯರ್‌ ಅವರನ್ನು ಅಭಿನಂದಿಸಿದರು.

ಆಸ್ತಿ ತೆರಿಗೆ, ಟೆಂಡರ್‌ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು. ಶಾಸಕ ಆಸೀಫ್‌ ( ರಾಜು) ಸೇಠ್‌, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮತ್ತು ನಗರ ಸೇವಕರು ಉಪಸ್ಥಿತರಿದ್ದರು.