ಸಂಘದ ನೂತನ ನಿರ್ದೇಶಕರ ಆಯ್ಕೆ ವೇಳೆ ಚುನಾವಣೆಯಲ್ಲಿ ಸತ್ತವರ ಹೆಸರಿನಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿದ ಷೇರುದಾರ ಸದಸ್ಯರಾದ ಹಾರೋಹಳ್ಳಿ ಪರಮೇಶ್, ಹಿರೀಮರಳಿ ಎಚ್.ಜೆ.ಚಂದನ್, ಶಾಂತಿಪ್ರಸಾದ್ ಹಾಗೂ ಮಂಜು ಇತರರು, ನಾವು ಸತ್ತವರ ಅಂತ್ಯಕ್ರಿಯೆ ಮತ್ತು ತಿಥಿಗೂ ಹೋಗಿ ಬಂದಿದ್ದೇವೆ. ಆದರೆ, ಅಂತಹವರ ಹೆಸರಿನಲ್ಲಿ ಅಕ್ರಮ ಮತದಾನ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಅಕ್ರಮವಾಗಿ ಸತ್ತವರ ಹೆಸರಿನಲ್ಲಿ ನಕಲಿ ಮತದಾನ ನಡೆದಿದೆ ಎಂದು ಷೇರುದಾರರು ಗಂಭೀರ ಆರೋಪ ಮಾಡಿದರು.ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆದ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಈ.ರವಿಕುಮಾರ್‌ಗೆ ಷೇರುದಾರ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು. ಆಡಳಿತ ಮಂಡಳಿ ಸದಸ್ಯರಿಗೆ ಷೇರುದಾರರು ಬೆವರಿಳಿಸಿದರು.
ಸಂಘದ ನೂತನ ನಿರ್ದೇಶಕರ ಆಯ್ಕೆ ವೇಳೆ ಚುನಾವಣೆಯಲ್ಲಿ ಸತ್ತವರ ಹೆಸರಿನಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿದ ಷೇರುದಾರ ಸದಸ್ಯರಾದ ಹಾರೋಹಳ್ಳಿ ಪರಮೇಶ್, ಹಿರೀಮರಳಿ ಎಚ್.ಜೆ.ಚಂದನ್, ಶಾಂತಿಪ್ರಸಾದ್ ಹಾಗೂ ಮಂಜು ಇತರರು, ನಾವು ಸತ್ತವರ ಅಂತ್ಯಕ್ರಿಯೆ ಮತ್ತು ತಿಥಿಗೂ ಹೋಗಿ ಬಂದಿದ್ದೇವೆ. ಆದರೆ, ಅಂತಹವರ ಹೆಸರಿನಲ್ಲಿ ಅಕ್ರಮ ಮತದಾನ ಮಾಡಿದ್ದಾರೆ. ಈ ಅಕ್ರಮ ಮತದಾನದಲ್ಲಿ ಅಧ್ಯಕ್ಷರು ತಮ್ಮ ಪ್ರಭಾವ ಬಳಸಿಕೊಂಡಿದ್ದಾರೆ ಎಂದು ದೂರಿದರು.ಸಂಘದಿಂದ ಸದಸ್ಯರಿಗೆ ನೀಡುವ ನಿವೇಶನ ಹಂಚಿಕೆಯಲ್ಲಿ ಅಕ್ರಮ, ಅವ್ಯವಹಾರ ನಡೆದಿದೆ ಎಂದು ಅಧ್ಯಕ್ಷ ಜಿ.ರವಿಕುಮಾರ್ ಅವರ ಮೇಲೆ ಸದಸ್ಯರು ಹರಿಹಾಯ್ದರು.
ತಾಲೂಕಿನ ಚಂದ್ರೆ ಗ್ರಾಮದ ಸಮೀಪ ಬಡಾವಣೆ ನಿರ್ಮಾಣ ಮಾಡಲು ಜಮೀನುದಾರ ಶಿವಲಿಂಗಯ್ಯ ಅವರಿಗೆ ನೀಡಲಾಗಿರುವ 1.30ಕೋಟಿ ರು. ಚೆಕ್ ನೀಡಿರುವುದು ಕ್ರಮಬದ್ಧವಾಗಿಲ್ಲ. ಈ ಜಮೀನು ಖರೀದಿಯಲ್ಲಿ ರಿಜಿಸ್ಟರ್ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದೆ. ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಬೇಜಾಬ್ದಾರಿತನ ತೋರಿಸುತ್ತದೆ ಎಂದು ಸಂಘದ ಸದಸ್ಯರಾದ ಹಾರೋಹಳ್ಳಿ ಎಚ್.ಕೆ.ಜನಾರ್ಧನ್, ಬೀರಶೆಟ್ಟಹಳ್ಳಿ ಶಿವಣ್ಣ, ಜೆ.ಗಂಗಾಧರ್ ಇತರರು ಹರಿಹಾಯ್ದರು.ತಾಲೂಕಿನ ಹರಹಳ್ಳಿ ಬಳಿ ಸದಸ್ಯರಿಗೆ ನಿವೇಶನ ಹಂಚಲು ಬಡಾವಣೆ ಮಾಡಿ ಕೆಲವರಿಗೆ ಹಂಚಿಕೆ ಮಾಡಿದ್ದೀರಿ. ಆದರೆ, ಇ-ಸ್ವತ್ತುನಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಜಾಗದ ಆರ್‌ಟಿಸಿ ಮೂಲ ಜಮೀನುದಾರರನ ಹೆಸರಿನಲ್ಲಿ ಇದೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಂಘದಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆ 64 ನಿಯಮದ ಪ್ರಕಾರ ಸಹಕಾರ ನಿಬಂಧಕರ ಮೇಲಾಧಿಕಾರಿಗಳು ತನಿಖೆ ಮಾಡಬೇಕಿತ್ತು. ಆದರೆ, ಸಂಘದ ಅಧ್ಯಕ್ಷ ಜಿ.ಈ.ರವಿಕುಮಾರ್ ಮತ್ತು ಪದಾಧಿಕಾರಿಗಳು ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದೀರಿ. ಮೊದಲು ಈ ತಡೆಯಾಜ್ಞೆ ತೆರವುಗೊಳಿಸಲು ಸಹಕಾರ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಜೊತೆಗೆ ಸಂಘದಲ್ಲಿ ನಡೆದಿರುವ ಈ ಹಿಂದಿನ 15 ವರ್ಷಗಳ ಅವಧಿಯ ಅಕ್ರಮ ಮತ್ತು ಅವ್ಯಹಾರಗಳ ತನಿಖೆಗೆ ಸಿಐಡಿ ತನಿಖೆಗೆ ವಹಿಸಬೇಕು ಎಂದು ಸದಸ್ಯ ಬೀರಶೆಟ್ಟಹಳ್ಳಿ ಬಾಲಗಂಗಾಧರ್ ಒತ್ತಾಯಿಸಿದರು.ಸರ್ವ ಸದಸ್ಯರ ಆಹ್ವಾನ ಪತ್ರಿಕೆ ಹಲವಾರು ಸದಸ್ಯರಿಗೆ ತಲುಪಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದವರಿಗೂ ಸರಿಯಾಗಿ ತಲುಪಿಲ್ಲ. ಇದಕ್ಕೆ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರ ಬೇಜಾಬ್ದಾರಿಯೇ ಕಾರಣ ಎಂದು ಸದಸ್ಯರು ಕಿಡಿಕಾರಿದರು.
ಬೆಳಗ್ಗೆ 11.30ಕ್ಕೆ ಪ್ರಾರಂಭವಾದ ಸರ್ವ ಸದಸ್ಯರ ಸಭೆ ಸುದೀರ್ಘ ಸಂಜೆ 6 ರವರೆಗೆ ನಡೆಯಿತು. ಸದಸ್ಯರ ಹಲವು ಪ್ರಶ್ನೆಗಳಿಗೆ ಅಧ್ಯಕ್ಷ ಜಿ.ಈ.ರವಿಕುಮಾರ್ ಸಮಂಜಸ ಉತ್ತರ ನೀಡದಿದ್ದಾಗ ಸಭೆಯಲ್ಲಿದ್ದ ಹಲವು ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ವೇಳೆ ನಿರ್ದೇಶಕರು, ಅಧ್ಯಕ್ಷರ ನೆರವಿಗೆ ಬಂದು ಉತ್ತರಿಸಿದರು. ಒಂದು ಹಂತದಲ್ಲಿ ಸಾಮಾನ್ಯ ಸಭೆಯನ್ನೇ ರದ್ದು ಮಾಡುವಂತೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಕಣ್ಣಾ, ನಿರ್ದೇಶಕರಾದ ಎಚ್.ಎಲ್.ಮುರುಳೀಧರ್, ಡಿ.ಕೆ.ದೇವೇಗೌಡ, ಎಚ್.ಎನ್.ಚಿಟ್ಟಿಬಾಬು, ಎಚ್.ಎನ್.ದಯಾನಂದಬಾಬು, ಹಿರೀಮರಳಿ ಶಿವಕುಮಾರ್, ಪ್ರತಾಪ್, ವೆಂಕಟೇಶ್ ಮೊದಲಿಯಾರ್, ಜಿ.ಈ.ರಮೇಶ್, ಬಾಲು ದೇವೇಗೌಡನಕೊಪ್ಪಲು, ಜ್ಯೋತಿ ಚಿಕ್ಕಾಡೆ, ರೋಜಾ ಹಳೇಬೀಡು, ನಟರಾಜು, ಕಾಂತರಾಜು, ಪ್ರಭಾರ ಕಾರ್ಯದರ್ಶಿ ಪ್ರಕಾಶ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.