ಸಾರಾಂಶ
ರಾಣಿಬೆನ್ನೂರು: ತಾಲೂಕಿನ ರೈತರಿಗೆ ಖಾಸಗಿ ವಿಮಾ ಕಂಪನಿಯವರು ಕೂಡಲೇ ಬೆಳೆವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ತಾಲೂಕಿನ ಸುಣಕಲ್ಲಬಿದರಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಕಳೆದ ಬಾರಿ ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದ ಮೇಲೆ ಬೆಳೆವಿಮೆ ಮಾಡಿಸಿದ ಎಲ್ಲ ರೈತರ ಖಾತೆಗೆ ವಿಮಾ ಕಂಪನಿಯವರು ಶೇ. 25ರಷ್ಟು ಪರಿಹಾರ ಹಾಕಿದ್ದರು. ಬಾಕಿಯಿರುವ ಶೇ. 75ರಷ್ಟು ಪರಿಹಾರ ಕೊಡುವುದಾಗಿ ತಿಳಿಸಿದ್ದರು.ಆದರೀಗ ವರ್ಷ ಕಳೆದರೂ ವಿಮಾ ಕಂಪನಿಯವರು ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಬೆಳೆವಿಮೆಯ ಬಾಕಿ ಹಣ ನೀಡುವಂತೆ ಕೇಳಿದರೆ, ಇಲ್ಲಸಲ್ಲದ ನೆಪಹೇಳಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವಿಮಾ ಕಂಪನಿಯವರಿಗೆ ಸೂಚಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ರೈತರಾದ ಭರತಗೌಡ ಕೂಸಗೂರ, ಮಂಜಪ್ಪ ಲಿಂಗದಹಳ್ಳಿ, ರಾಮನಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಶಿವಮೂರ್ತೆಪ್ಪ ಅರಳಿ, ಸುರೇಶ ಅರಳಿ, ಗದಿಗೆಪ್ಪ ಸುಡಂಬಿ, ಬಸವಂತಪ್ಪ ಹಿಂಡೇರ, ಕರಬಸಪ್ಪ ಅರಳಿ, ಗಿರೀಶ ಹುಡೇದ, ಶಂಕ್ರಗೌಡ ಕುಸಗೂರ, ನಾಗಪ್ಪ ಪುಟ್ಟನಗೌಡ, ಶಿವನಗೌಡ ಪೊಲೀಸಗೌಡ, ವೀರಯ್ಯ ದೇವಗಿರಿಮಠ, ಗಿರೀಶ ಮುದಿಗೌಡ್ರ ಮತ್ತಿತರರು ಪಾಲ್ಗೊಂಡಿದ್ದರು.