ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ ನಾಲ್ಕುದುರೆ ಗ್ರಾಮದಲ್ಲಿ ಪೈಪ್ ಲೈನ್ ಅಳವಡಿಸಲು ರೈತನಿಗೆ ಅಡ್ಡಿಪಡಿಸಿದ್ದಲ್ಲದೇ, ಆತನ ಆರೋಗ್ಯ ಹದಗೆಡಲು ನೀರಾವರಿ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಹದಡಿ ರಸ್ತೆಯ ನೀರಾವರಿ ಇಲಾಖೆ ಕಚೇರಿಗೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹಾಗೂ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಇಲಾಖೆ ಅಧೀಕ್ಷಕ ಅಭಿಯಂತರ ಮಂಜುನಾಥ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ್ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.ಪದೇಪದೇ ಕಿರುಕುಳ:
ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ದಾವಣಗೆರೆ ತಾಲೂಕು ನಲ್ಕುದುರೆ ಗ್ರಾಮದ ರೈತ ಮುಖಂಡ ನಲ್ಕುದುರೆ ಚನ್ನಬಸಪ್ಪ ಹೊಲದ ಪಕ್ಕದಲ್ಲೇ ರಸ್ತೆ ಹೋಗಿದೆ. ಹಿಂದೆ ಹಳೆ ರಸ್ತೆ ಇದ್ದ ಜಾಗದಲ್ಲೇ ಈಗ ಹೊಸ ರಸ್ತೆ ನಿರ್ಮಿಸಲಾಗಿದೆ. ರಸ್ತೆಯನ್ನು ಅಗೆದು, ಪೈಪ್ ಲೈನ್ ಹಾಕಿ, ಚನ್ನಬಸಪ್ಪನವರ ಜಮೀನಿಗೆ ನೀರು ಹರಿಸಬೇಕಿತ್ತು. ಆದರೆ, ಇದಕ್ಕೆ ಅಡ್ಡಿಪಡಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಪದೇಪದೇ ರೈತ ಮುಖಂಡ ಚನ್ನಬಸಪ್ಪಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ನೀರು ಇಲ್ಲದೇ ಬೆಳೆ ಬೆಳೆಯುವುದಕ್ಕೆ ಆಗುವುದಿಲ್ಲ ಎಂಬ ಕನಿಷ್ಠ ಅರಿವು ಸಹ ನೀರಾವರಿ ಇಲಾಖೆ ಅಧಿಕಾರಿಯಾದವರಿಗೆ ಇಲ್ಲವೇ? ನೀರು ಇಲ್ಲದೇ ತಮ್ಮ ಭೂಮಿ ಬೀಳುತ್ತದೆಂಬ ಆತಂಕದಲ್ಲಿ, ನೀರಾವರಿ ಇಲಾಖೆ ಅಧಿಕಾರಿಗಳ ದರ್ಪ, ದೌರ್ಜನ್ಯದಿಂದಾಗಿ ರೈತ ಮುಖಂಡ ನಲ್ಕುದುರೆ ಚನ್ನಬಸಪ್ಪ ಆರೋಗ್ಯ ಹದಗೆಟ್ಟಿದೆ. ರಕ್ತದೊತ್ತಡ ತೀರಾ ಕೆಳಮಟ್ಟಕ್ಕಿಳಿದು, ಸಾವು ಬದುಕಿನ ಮಧ್ಯೆ ಹೋರಾಟ ಮಾಡುವಂತಾಗಿದೆ. ಇದಕ್ಕೆ ನೀರಾವರಿ ಅಧಿಕಾರಿಗಳ ದೌರ್ಜನ್ಯವೇ ಕಾರಣ ಎಂದು ಕಿಡಿಕಾರಿದರು.
ಮಾನವೀಯತೆಯಿಂದ ವರ್ತಿಸಿ:ಸಂಘದ ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ ಮಾತನಾಡಿ, ರೈತರಿಗೆ ಕಿರುಕುಳ ನೀಡಿದರೆ ಏನಾಗುತ್ತದೆ ಎಂದೆಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಚನ್ನಬಸಪ್ಪನವರ ವಿಷಯ ತಿಳಿದು ರೈತ ಸಂಘದ ಪದಾಧಿಕಾರಿಗಳು, ಮುಖಂಡರು ನಲ್ಕುದುರೆ ಚನ್ನಬಸಪ್ಪಗೆ ಧೈರ್ಯ ತುಂಬಿದ್ದರಿಂದ ಆರೋಗ್ಯದಲ್ಲಿ ಒಂದಿಷ್ಟು ಸುಧಾರಣೆ ಕಂಡಿದ್ದಾರೆ. ಆಕಸ್ಮಾತ್ ಸಂಘದ ಮುಖಂಡರ ಗಮನಕ್ಕೆ ಈ ವಿಚಾರ ಬರದೇ ಇದ್ದಿದ್ದರೆ ಚನ್ನಬಸಪ್ಪನವರ ಜೀವಕ್ಕೆ ಅಪಾಯವಿತ್ತು. ಅನಾಹುತವಾಗಿದ್ದರೆ ಯಾರು ಹೊಣೆ? ಅಧಿಕಾರಿಗಳು ದುರ್ವರ್ತನೆ ಬಿಟ್ಟು, ಮಾನವೀಯತೆಯಿಂದ ವರ್ತಿಸಲಿ ಎಂದು ತಾಕೀತು ಮಾಡಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ ನಾಯ್ಕ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣವೇ ನಲ್ಕುದುರೆ ಚನ್ನಬಸಪ್ಪನವರ ಜಮೀನಿಗೆ ಪೈಪ್‌ಲೈನ್ ಹಾಕಲು ಅಗತ್ಯ ಅನುಮತಿ ನೀಡಬೇಕು. ಇನ್ನು ಮುಂದೆ ರೈತರೊಂದಿಗೆ ಇಂತಹ ದುರ್ವರ್ತನೆ ತೋರುವುದಿಲ್ಲ ಎಂದು ಭರವಸೆ ನೀಡಬೇಕು. ಅಲ್ಲಿವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.ಸತತ 1 ಗಂಟೆ ಕಾಲ ರೈತರ ಪ್ರತಿಭಟನೆ ನಡೆಯಿತು. ಕಡೆಗೂ ಮಣಿದ ಅಧಿಕಾರಿಗಳು, ಸಂಘದ ಬೇಡಿಕೆಗೆ ಸಮ್ಮತಿಸಿದರು. ಆನಂತರವಷ್ಟೇ ಹೋರಾಟವನ್ನು ಹಿಂಪಡೆಯಲಾಯಿತು.
ಸಂಘದ ದಾವಣಗೆರೆ ತಾಲೂಕು ಅಧ್ಯಕ್ಷ ಮಂಡಲೂ ವಿಶ್ವನಾಥ, ಚನ್ನಗಿರಿ ಅಧ್ಯಕ್ಷ ಯಲೋದಹಳ್ಳಿ ಕಾಳೇಶ, ಮುಖಂಡರಾದ ದಾಗಿನಕಟ್ಟೆ ಬಸಪ್ಪ, ಮಾಸಡಿ ಭರಮಪ್ಪ, ಶ್ರೀನಿವಾಸ ನೇತೃತ್ವ ವಹಿಸಿದ್ದರು.