ಧಾರವಾಡ:

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದಿ. ವಿ.ವಿ. ದೇಶಪಾಂಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ವಿವಿಧ ಎಂಜಿನಿಯರ್ಸ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಅ. 24ರ ಸಂಜೆ 4ಕ್ಕೆ ಇಲ್ಲಿಯ ಆಲೂರು ಭವನದಲ್ಲಿ ಆಯೋಜಿಸಲಾಗಿದೆ.

ಗುರುವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದಿ. ವಿ.ವಿ. ದೇಶಪಾಂಡೆ ಪುತ್ರರು ಹಾಗೂ ಖ್ಯಾತ ಮಕ್ಕಳ ತಜ್ಞರೂ ಆದ ಡಾ. ರಾಜನ್‌ ದೇಶಪಾಂಡೆ, 1926ರ ಅ. 24ರಂದು ಜನಿಸಿದ ವಿ.ವಿ. ದೇಶಪಾಂಡೆ, ವಿಠ್ಠಲರಾವ್ ದೇಶಪಾಂಡೆ ಅಥವಾ ವಿ.ವಿ.ಡಿ. ಎಂದೇ ಪರಿಚಿತರಾಗಿದ್ದರು. ಬಾಂಬೆ ರಾಜ್ಯದ ಪ್ರತಿಷ್ಠಿತ ಬಾಂಬೆ ಸರ್ವೀಸ್ ಆಫ್ ಎಂಜಿನಿಯರ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅವರು, ನೇರವಾಗಿ ರಾಜ್ಯ ಸರ್ಕಾರದಲ್ಲಿ ಗೆಜೆಟೆಡ್ ಹುದ್ದೆಗೆ ನೇಮಕವಾದರು ಎಂದರು.

ಪ್ರಮುಖ ನೀರಾವರಿ ಯೋಜನೆಯಲ್ಲಿ ಕಾರ್ಯ:

ಘಟಪ್ರಭಾ, ಮಲಪ್ರಭಾ, ಭದ್ರಾ ಮತ್ತು ಕಾಳಿ ಸೇರಿದಂತೆ ಹಲವು ಪ್ರಮುಖ ನೀರಾವರಿ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅವರು, ವಿಶೇಷವಾಗಿ ಸೂಪಾ ಅಣೆಕಟ್ಟಿನ ವಿನ್ಯಾಸದಲ್ಲಿ ತಾಂತ್ರಿಕ ಪರಿಣತಿ ಮತ್ತು ಕೊಡುಗೆಯನ್ನು ಅವರೊಂದಿಗೆ ಸೇವೆ ಸಲ್ಲಿಸಿದ ಹಿರಿಯ ಎಂಜಿನಿಯರ್‌ಗಳು ಸ್ಮರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಸೇವೆ ಸಲ್ಲಿಸಿದ ಹಿರಿಯ ಎಂಜಿನಿಯರ್‌ಗಳಾದ ಜಿ.ಸಿ. ತಲ್ಲೂರು, ರಾಜಮನೆ ಬಿ.ಟಿ., ಪಿ.ಕೆ. ಜುಂಜರವಾಡ, ಎಸ್.ಎಸ್. ಬೆಳ್ಳುಂಕೆ, ಸತ್ಯನಾರಾಯಣ, ವಿ.ಎಸ್. ಚಳಗೇರಿ, ಡಾ. ವಿಜಯಾ ಹಿರೇಮಠ ಅವರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ ಎಂದು ಡಾ. ರಾಜನ್‌ ತಿಳಿಸಿದರು.


ಕಾರ್ಯಕ್ರಮದಲ್ಲಿ ವಿ.ವಿ. ದೇಶಪಾಂಡೆ ಜೀವನ ಮತ್ತು ಸಾಧನೆ ಪರಿಚಯಿಸುವ ಆಡಿಯೋ-ವಿಶುವಲ್ ಪ್ರಸ್ತುತಿ ಇರಲಿದೆ. ಜತೆಗೆ ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಕುಲಕರ್ಣಿ ಕಟ್ಟಿ ಅವರಿಂದ “ಸ್ವರ ನಮನ” ನಡೆಯಲಿದೆ. ಹಾಗೆಯೇ, ತಂದೆಯವರ ಸ್ಮರಣೆಗಾಗಿ ಕುಟುಂಬದ ವತಿಯಿಂದ ನಿವೃತ್ತ ಎಂಜಿನಿಯರ್‌ ಎಂ.ಬಿ. ಪರಪ್ಪಗೌಡರ ಅವರಿಗೆ ಜೀವಮಾನ ಪ್ರಶಸ್ತಿ ಹಾಗೂ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಶ್ರೇಷ್ಠತೆ ಪ್ರಶಸ್ತಿಯನ್ನು ಜಗದೀಶ್ ನಂದಿ ಅವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ, ಮಾಜಿ ಸಚಿವ ಎಚ್‌.ಕೆ. ಪಾಟೀಲ, ಶಾಸಕ ಅರವಿಂದ ಬೆಲ್ಲದ ಹಾಗೂ ಮುಂಬೈನ ಹಿರಿಯ ಕ್ಯಾನ್ಸರ್‌ ತಜ್ಞ ಪದ್ಮಶ್ರೀ ಡಾ. ರಮಣ್ ದೇಶಪಾಂಡೆ ಸಹ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಎಂಜಿನಿಯರ್ಸ್‌ ಸಂಘಟನೆಗಳ ಪರವಾಗಿ ಕೆ.ಎಲ್‌. ಪಾಟೀಲ, ಎ.ಸಿ. ತಹಶೀಲ್ದಾರ, ಸಿದ್ದು ಪಾಟೀಲ, ಅರುಣ ಶೀಲವಂತರ ಹಾಗೂ ಮಕ್ಕಳ ತಜ್ಞ ಕವನ ದೇಶಪಾಂಡೆ ಇದ್ದರು.