ಬರಪೀಡಿತ ಪ್ರದೇಶದ ಅಭಿವೃದ್ಧಿಗೆ ಏತನೀರಾವರಿ ಅಗತ್ಯ

| Published : Oct 04 2024, 01:08 AM IST

ಬರಪೀಡಿತ ಪ್ರದೇಶದ ಅಭಿವೃದ್ಧಿಗೆ ಏತನೀರಾವರಿ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತ ನೀರಾವರಿ ಯೋಜನೆಗಳು ಅನಿವಾರ್ಯ ಮತ್ತು ಅಗತ್ಯವಾಗಿವೆ ಎಂದು ಬೆಂಗಳೂರಿನ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ವೆಂಕಟ ಸುಬ್ರಹ್ಮಣ್ಯಂ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮಧ್ಯ ಕರ್ನಾಟಕದ ಬರ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತ ನೀರಾವರಿ ಯೋಜನೆಗಳು ಅನಿವಾರ್ಯ ಮತ್ತು ಅಗತ್ಯವಾಗಿವೆ ಎಂದು ಬೆಂಗಳೂರಿನ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ವೆಂಕಟ ಸುಬ್ರಹ್ಮಣ್ಯಂ ಹೇಳಿದರು.ಸಿರಿಗೆರೆ ಸಮೀಪದ ಶಾಂತಿವನದಲ್ಲಿ ಜಾಗತಿಕ ಹವಾಮಾನ ನಿಯಂತ್ರಣದ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರಗಳು ಕುರಿತಂತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ತುಂಗಾಭದ್ರ ನದಿ ಸುಮಾರು 382 ಕಿ.ಮೀ. ದೂರವನ್ನು ಕ್ರಮಿಸುತ್ತಿದೆ. ಆದರೂ ಈ ನದಿಯ ಎರಡೂ ದಂಡೆಗಳ ಪ್ರದೇಶಗಳು ಇವತ್ತಿಗೂ ಬಹುತೇಕ ಬರ ಪ್ರದೇಶವಾಗಿವೆ. ನದಿಯಲ್ಲಿ ಹರಿಯುವ ನೀರನ್ನು ಬಳಸಿಕೊಂಡು ಆಯಾಯ ಭಾಗದ ಕೆರೆಗಳನ್ನು ಏತನೀರಾವರಿ ಮೂಲಕ ತುಂಬಿಸುವ ಕೆಲಸ ತ್ವರಿತವಾಗಿ ಆದರೆ ಸುಸ್ಥಿರ ಕೃಷಿ ಸಾಧ್ಯವಿದೆ. ಅಂತಹ ಕೆಲಸವನ್ನು ಮಧ್ಯ ಕರ್ನಾಟಕದಲ್ಲಿ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಂದಾಳತ್ವದಲ್ಲಿ ಆಗುತ್ತಿದೆ ಎಂದರು.

ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನದಿಗಳು ಹಾದು ಹೋಗುವ ಪ್ರದೇಶಗಳಲ್ಲಿನ ಕೆರೆಗಳನ್ನು ತುಂಬಿಸಬೇಕು. ಇದರಿಂದ ನದಿಗಳಲ್ಲಿನ ಪ್ರವಾಹ ಮಟ್ಟವನ್ನು ತಗ್ಗಿಸುವುದು, ಅಂತರ್ಜಲ ಮಟ್ಟವನ್ನು ವೃದ್ಧಿಸುವುದು, ಆಯಾಯಾ ಭಾಗದ ಜನರ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಕಾರಣವಾಗುತ್ತದೆ. ಇದು ಈಗ ಎದುರಿಸುತ್ತಿರುವ ಜಾಗತಿಕ ಹವಾಮಾನ ಬದಲಾವಣೆಯಂತಹ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ ಎಂದು ತಿಳಿಸಿದರು.

ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ದೊಡ್ಡ ಡ್ಯಾಂಗಳ ನಿರ್ಮಾಣದಿಂದ ಪರಿಸರ ಹಾನಿ, ಮಿತಿಮೀರಿದ ವೆಚ್ಚ, ಡ್ಯಾಂಗಳಲ್ಲಿ ಊಳು ತುಂಬುವುದರಿಂದ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಆಗುವ ಅಂಶಗಳನ್ನು ಬಗ್ಗೆ ಮಾತನಾಡಿದರು.

ತರಳಬಾಳು ಕೃಷಿ ಕೇಂದ್ರದ ನಿರ್ದೇಶಕ ಹಾಗೂ ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯ ಕೆ.ಪಿ. ಬಸವರಾಜ್ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ಜಾರಿಯಾಗುತ್ತಿರುವ ಏತ ನೀರಾವರಿ ಯೋಜನೆಗಳು ಮಾದರಿಯಾಗಿವೆ. ಜತೆಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ 3 ಜಿಲ್ಲೆಗಳಲ್ಲಿ ಆರಂಭವಾಗಿರುವ 17 ರೈತ ಉತ್ಪಾದಕ ಸಂಘಗಳನ್ನು ಸದೃಢಗೊಳಿಸಿ ರೈತರಿಗೆ ಬೇಕಾಗಿರುವ ಬೀಜ, ಗೊಬ್ಬರ, ಕೀಟನಾಶಕಗಳು ಮತ್ತು ಇತರೆ ಪರಿಕರಗಳು ಹಾಗೂ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುವುದು ಮಾದರಿಯಾಗಿದೆ ಎಂದರು.ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಭಾಗವಹಿಸಿದ್ದರು.