ವೆಂಗಯ್ಯನ ಕೆರೆ ಏತ ನೀರಾವರಿ ರೈತರಿಗೆ ವರದಾನ
KannadaprabhaNewsNetwork | Published : Oct 14 2023, 01:00 AM IST
ವೆಂಗಯ್ಯನ ಕೆರೆ ಏತ ನೀರಾವರಿ ರೈತರಿಗೆ ವರದಾನ
ಸಾರಾಂಶ
ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು ಅಕ್ಟೋಬರ್ ಮಾಸಾಂತ್ಯಕ್ಕೆ ಮೊದಲ ಹಂತದ ಕಾಮಗಾರಿ ಉದ್ಘಾಟನೆ ಮಾಡುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಕೆರೆಗಳಿಗೆ ನೀರು ಹರಿಸುವ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು ಅಕ್ಟೋಬರ್ ಮಾಸಾಂತ್ಯಕ್ಕೆ ಮೊದಲ ಹಂತದ ಕಾಮಗಾರಿ ಉದ್ಘಾಟನೆ ಮಾಡುತ್ತೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ತಾಲೂಕಿನ ಕೊರಳೂರು, ಅಪ್ಪಾಜಿಪುರ, ಬಿಸನಹಳ್ಳಿ, ಕೋಡಿಹಳ್ಳಿ ಬಳಿಯ ಕೆರೆಗಳಿಗೆ ತೆರಳಿ ಪ್ರಾಯೋಗಿಕ ನೀರು ಹರಿಸುವುದರ ಮೂಲಕ ಪರಿಶೀಲಿಸಿ ಮಾತನಾಡಿದ ಅವರು, ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಸರ್ಕಾರ ಬದ್ದವಾಗಿದ್ದು, ಅಗತ್ಯ ಯೋಜನೆಗಳಿಗೆ ಅಗತ್ಯ ಅನುದಾನಗಳಲ್ಲಿ ಬಿಡುಗಡೆ ಮಾಡುವ ಕಾರ್ಯ ಮಾಡಲಾಗುವುದು. ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆ ರೈತರಿಗೆ ವರದಾನವಾಗಲಿದೆ. ಮೂರು ಹೋಬಳಿಗಳ ಕೆರೆಗಳಿಗೆ ನೀರು ಹರಿಸಲಾಗುವುದು. ಉಳಿದಂತೆ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳ ಕೆರೆಗಳಿಗೆ 2ನೇ ಹಂತದ ವೃಷಭಾವತಿ ವ್ಯಾಲಿ ಯೋಜನೆ ಮೂಲಕ ನೀರು ಪೂರೈಸುವ ಬಗ್ಗೆ ಈಗಾಗಲೆ ಸಣ್ಣ ನೀರಾವರಿ ಸಚಿವರ ಬಳಿ ಚರ್ಚೆ ನಡೆಸಲಾಗಿದ್ದು ಯೋಜನೆ ಅನುಷ್ಠಾನ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. 43 ಎಂಎಲ್‌ಡಿ ನೀರು: ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಮೂಲಕ ಹೊಸಕೋಟೆ ತಾಲೂಕಿನ 38 ಕೆರೆಗಳಿಗೆ 43 ಎಂ.ಎಲ್.ಡಿ ಸಂಸ್ಕರಿಸಿದ ನೀರನ್ನು ತುಂಬಿಸುವ 132 ಕೋಟಿ ರುಪಾಯಿ ವೆಚ್ಚದ ಮಹತ್ತರ ಯೋಜನೆಯ ಇದಾಗಿದೆ. ಅಕ್ಟೋಬರ್ ಮಾಸಾಂತ್ಯಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು. ಈ ಹಿನ್ನೆಲೆಯಲ್ಲಿ ನಿರ್ಮಿಸಿರುವ ವಾಲ್‌ಗಳು, ಚೇಂಬರ್‌ಗಳು, ಕೆರೆಯ ಅಭಿವೃದ್ಧಿ ಪ್ರದೇಶ, ಕಟ್ಟೆಗಳ ವೀಕ್ಷಿಸಲಾಗಿದೆ ಎಂದು ಹೇಳಿದರು. ಟಿಎಪಿಸಿಎಂಎಸ್ ಮಾಜಿ ಅದ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸುನಿಲ್, ಯುವ ಮುಖಂಡ ಭೋದನಹೊಸಹಳ್ಳಿ ಪ್ರಕಾಶ್, ಸಣ್ಣ ನೀರಾವರಿ ಇಲಾಖೆ ಎಇಇ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಹಾಜರಿದ್ದರು. ಬಾಕ್ಸ್........ 3ನೇ ಹಂತದಲ್ಲಿ ಡಿಸ್ಕ್ ಮೆಮೊರಿ ಫಿಲ್ಟರ್ ಅಳವಡಿಕೆ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಮೂರನೆ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಹೊಸಕೋಟೆಗೆ ತರಲು ಚಿಂತನೆ ನಡೆಸಲಾಗಿದ್ದು ಮಾದರಿ ಯೋಜನೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಡಿಸ್ಕ್ ಮೆಮೊರಿ ಅಂಡ್ ಫಿಲ್ಟರ್ ತಂತ್ರಜ್ಞಾನ ಸಿಸ್ಟಮ್ ಅಳವಡಿಸಿ ಕೆಆರ್‌ಪುರಂ ಘಟಕದ 25 ಎಂಎಲ್‌ಡಿ, ಮೇಡಹಳ್ಳಿಯ 15 ಎಂಎಲ್‌ಡಿ, ಕಾಡುಗೋಡಿಯ 66 ಎಂಎಲ್‌ಡಿ ನೀರನ್ನು ಮಾದರಿ ಯೋಜನೆಯಡಿ 3ನೇ ಹಂತದಲ್ಲಿ ಶುದ್ಧೀಕರಿಸಿ ಯುವಿಆರ್‌ಒ ರೀತಿ ಬಿಟ್ಟು ಎಲ್ಲಾ ರೀತಿ ಸಂಸ್ಕರಿಸಿ ನೀರು ಹರಿಸುವ ಚಿಂತನೆ ನಡೆಸಲಾಗಿದೆ. ಈ ನೀರನ್ನು ಕುಡಿಯಲು ಬಿಟ್ಟು ಬೇರೆಲ್ಲಾ ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಫೋಟೋ : 13 ಹೆಚ್‌ಎಸ್‌ಕೆ 1 ಮತ್ತು 2 1.ಹೊಸಕೋಟೆ ತಾಲೂಕಿನ ಅಪ್ಪಾಜಿಪುರ ಬಳಿ ಮುಕ್ತಯಗೊಂಡ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೇಗೌಡ ಪರಿಶೀಲಿಸಿದರು. 2 ಹೊಸಕೋಟೆ ತಾಲೂಕಿನ ಬಿಸನಹಳ್ಳಿ ಬಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿ ಕುರಿತು ಶಾಸಕ ಶರತ್ ಬಚ್ಚೇಗೌಡ ಪರೀಕ್ಷಾರ್ಥ ನೀರು ಹರಿಸುವ ಮೂಲಕ ಪರಿಶೀಲಿಸಿದರು.