ಚಲುವರಾಯಸ್ವಾಮಿ ಅವರು ಕೃಷಿ ಖಾತೆ ಸಚಿವರಾಗಿ ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯವನ್ನು ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಈಗ ಆ ಖಾತೆಯನ್ನು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ನೀಡಲಾಗಿದೆ. ಮಳವಳ್ಳಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಸಂಪುಟ ಸೇರಿದ್ದ ನರೇಂದ್ರಸ್ವಾಮಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮತ್ತು ಪಶುಸಂಗೋಪನಾ ಖಾತೆಯನ್ನು ನಿಭಾಯಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಚಿವರಿಗೆ ಖಾತೆಗಳ ಹಂಚಿಕೆಯಾಗಿದ್ದು, ಜಿಲ್ಲೆಯ ಎನ್.ಚಲುವರಾಯಸ್ವಾಮಿ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಪಿ.ಎಂ.ನರೇಂದ್ರ ಸ್ವಾಮಿ ಅವರಿಗೆ ಕೃಷಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ.ಚಲುವರಾಯಸ್ವಾಮಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಗುವ ನಿರೀಕ್ಷೆ ಇತ್ತು. ಅದರಂತೆಯೇ ನೀರಾವರಿ ಖಾತೆ ಅವರಿಗೆ ದೊರಕಿದೆ. ಜೆ.ಎಚ್.ಪಟೇಲ್ ಸಂಪುಟದಲ್ಲಿ ಜಿಲ್ಲೆಯವರೇ ಆದ ಕೆ.ಎನ್.ನಾಗೇಗೌಡರು ನೀರಾವರಿ ಖಾತೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಅವರ ಬಳಿಕ ಜಿಲ್ಲೆಯ ಚಲುವರಾಯಸ್ವಾಮಿ ಅವರಿಗೆ ಒಲಿದುಬಂದಿದೆ.
ಜೆಡಿಎಸ್- ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ, ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ, ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಖಾತೆ ನಿರ್ವಹಿಸಿದ್ದ ಎನ್.ಚಲುವರಾಯಸ್ವಾಮಿ ಅವರು ಇದೀಗ ಜಲಸಂಪನ್ಮೂಲ ಖಾತೆಯ ಹೊಣೆಯನ್ನು ಹೊತ್ತಿದ್ದಾರೆ.ನೀರಾವರಿ ಖಾತೆ ವಹಿಸಿಕೊಂಡ ಸಮಯದಲ್ಲೇ ಕಾವೇರಿ ವಿವಾದವೂ ಎದುರಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶ ಹೊರಬಿದ್ದಿದೆ. ರೈತರು, ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇಲ್ಲಿನ ರೈತರ ಬೆಳೆಗಳಿಗೂ ನೀರು ಕೊಡಬೇಕಾದ ದೊಡ್ಡ ಸವಾಲು ಅವರಿಗೆ ಈಗ ಎದುರಾಗಿದೆ. ಅದನ್ನು ಹೇಗೆ ನಿಭಾಯಿಸುವರು ಎನ್ನುವುದನ್ನು ನೋಡಬೇಕಿದೆ.
ಚಲುವರಾಯಸ್ವಾಮಿ ಅವರು ಕೃಷಿ ಖಾತೆ ಸಚಿವರಾಗಿ ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯವನ್ನು ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಈಗ ಆ ಖಾತೆಯನ್ನು ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ನೀಡಲಾಗಿದೆ. ಮಳವಳ್ಳಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಸಂಪುಟ ಸೇರಿದ್ದ ನರೇಂದ್ರಸ್ವಾಮಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮತ್ತು ಪಶುಸಂಗೋಪನಾ ಖಾತೆಯನ್ನು ನಿಭಾಯಿಸಿದ್ದರು.ಕೃಷಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ನರೇಂದ್ರಸ್ವಾಮಿ ಅವರು, ಮಳವಳ್ಳಿ ಕ್ಷೇತ್ರದಲ್ಲಿ ಹನಿ ಮತ್ತು ತುಂತುರು ನೀರಾವರಿಯನ್ನು ಪರಿಚಯಿಸಿ ರೈತರೆಲ್ಲರೂ ಒಗ್ಗೂಡಿ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ಧತಿಯನ್ನು ಪರಿಚಯಿಸಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರಿಂದ ಜಿಲ್ಲೆಗೆ ಯಾವ ಕೊಡುಗೆ ಸಿಗಬಹುದೆಂಬುದು ಕುತೂಹಲ ಮೂಡಿಸಿದೆ.