ನೀರಾವರಿ ಯೋಜನೆ: ₹505 ಕೋಟಿ ಡಿಪಿಆರ್‌ ಸಿಎಂಗೆ ಸಲ್ಲಿಕೆ

| Published : Mar 10 2025, 12:18 AM IST

ಸಾರಾಂಶ

ಜಿಲ್ಲೆಯ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ೫೦೫ ಕೋಟಿ ರು.ಗಳ ಕ್ರಿಯಾಯೋಜನೆಗೆ ಅನುದಾನವನ್ನು ಮುಂಬರುವ ದಿನಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಬಳಿಕ ೫೦ ರಿಂದ ೧೦೦ ಕೋಟಿ ರು. ಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ೫೦೫ ಕೋಟಿ ರು.ಗಳ ಕ್ರಿಯಾಯೋಜನೆಗೆ ಅನುದಾನವನ್ನು ಮುಂಬರುವ ದಿನಗಳಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಬಳಿಕ ೫೦ ರಿಂದ ೧೦೦ ಕೋಟಿ ರು. ಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೨೦೯ ಹುಲ್ಲೆಪುರ ಮಾರ್ಗ ಕೆಂಪನಪುರ ಸೇರಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲೆಯ ಕೆರೆಗಳನ್ನು ಅಭಿವೃದ್ದಿಪಡಿಸಿ, ನಾಲೆಗಳು ಹಾಗೂ ಕಾಲುವೆಗಳನ್ನು ದುರಸ್ತಿಪಡಿಸಿ, ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಪ್ರದೇಶವನ್ನಾಗಿಸಲು ಈಗಾಗಲೇ ೫೦೫ ಕೋಟಿ ರು.ಗಳ ಡಿಪಿಆರ್ ತಯಾರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸಲ್ಲಿಸಲಾಗಿತ್ತು. ಈ ಬಜೆಟ್‌ನಲ್ಲಿ ಅದನ್ನು ಸೇರ್ಪಡೆ ಮಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ಜಿಲ್ಲೆಯ ಶಾಸಕರು ನಂಬಿದ್ದೇವು. ಈಗಾಲು ಸಹ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ ಎಂದರು. ಈಗಾಗಲೇ ಸಿಎಂ ಸಿದ್ದರಾಮಯ್ಯರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವುದು ಎರಡು ಮೂರು ಬಾರಿ ಮುಂದಕ್ಕೆ ಹೋಗಿದೆ. ಈ ಬಾರಿ ಮಹದೇಶ್ವರರ ಸನ್ನಿಧಿಗೆ ಅವರು ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ. ಹೀಗಾಗಿ ಜಿಲ್ಲೆಯೇ ಈ ಯೋಜನೆ ಸೇರಿದಂತೆ ಅನೇಕ ಹೊಸ ಯೋಜನೆಗಳು ಹಾಗು ಜಿಲ್ಲೆಯ ಅಭಿವೃದ್ದಿಗೆ ಪೂರಕವಾದ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಹೀಗಾಗಿ ಬಜೆಟ್‌ನಲ್ಲಿ ನಮ್ಮ ಯೋಜನೆಯನ್ನು ಕೈಬಿಟ್ಟಿದ್ದಾರೆ. ಇದು ಶೀಘ್ರ ಸಕಾರಗೊಂಡರೆ, ಜಿಲ್ಲೆಯು ಸಂಪೂರ್ಣ ಹಸಿರು ಹಾಗೂ ನೀರಾವರಿ ಪ್ರದೇಶವಾಗಲಿದೆ. ಇತರೇ ಜಿಲ್ಲೆಗಳಿಗೆ ಹೋಲಿಕೆ ಮಾಡಿದಂತೆ ನಮ್ಮ ಜಿಲ್ಲೆಯಲ್ಲಿಯೇ ಯಾವುದೇ ಗುಡ್ಡ ಬೆಟ್ಟಗಳು, ಕಮ್ಮರಿಗಳು ಇಲ್ಲ. ಇದು ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು. ಜಿಲ್ಲೆಯ ೨೨ ಕೆರಗಳಿಗೆ ನೀರು ತುಂಬಿಸಿದ ಯೋಜನೆಯನ್ನು ಸುತ್ತೂರು ಶ್ರೀಗಳು ಸಕಾರಗೊಳಿಸಿದರು. ಅವರ ಇಚ್ಚಾಸಕ್ತಿ ಮತ್ತು ಪ್ರೇರಣೆಯಿಂದ ಅಂದು ಬಿಜೆಪಿ ಸರ್ಕಾರ ಜಾರಿ ಮಾಡಿದ್ದರು. ನಮ್ಮ ಸರ್ಕಾರ ಬಂದಾಗ ಅದನ್ನು ಪೂರ್ಣಗೊಳಿಸಿ, ಕೆರೆಗಳಿಗೆ ನೀರು ತುಂಬಿಸಲಾಯಿತು. ಈಗ ಈ ಭಾಗದಲ್ಲಿ ಹಸಿರು ಕಂಗೊಳಿಸುತ್ತವೆ. ಜೊತೆಗೆ ಅಂತರ್ಜಲ ವೃದ್ದಿಯಾಗಿ ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿಯು ಸಹ ಕುಡಿಯುವ ನೀರು ದೊರೆಯುತ್ತದೆ ಎಂದು ಕೃಷ್ಣಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು. ಪಿಡಬ್ಲ್ಯೂಡಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿಯ ಕೆಂಪನಪುರ ಗ್ರಾಮಸ್ಥರ ಮನವಿಯಂತೆ ಈ ರಸ್ತೆಯ ಅಭಿವೃದ್ದಿಗೆ ೩.೫೦ ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದಾರೆ. ಅವರನ್ನೇ ಶಂಕುಸ್ಥಾಪನೆಗೆ ಆಹ್ವಾನಿಸಬೇಕಾಗಿತ್ತು. ಆದರೆ, ಮಾರ್ಚ್ ತಿಂಗಳದಿಂದ ಕಾಮಗಾರಿಗೆ ನಾನೇ ಚಾಲನೆ ಕೊಟ್ಟಿದ್ದೇನೆ. ಕಾಮಗಾರಿ ನಿರ್ವಹಣೆಗೆ ಯಾರೇ ತೊಂದರೆ ಕೊಟ್ಟರು. ನನಗೆ ಹೇಳಿ. ಇಂಥ ಅಭಿವೃದ್ದಿ ಕಾಮಗಾರಿ ನಿಂತರೆ ನಮಗೆ ನಷ್ಟ. ಅಲ್ಲದೇ ಈ ವಿಚಾರವಾಗಿ ಯಾರೇ ಅಡ್ಡಿ ಪಡಿಸಿ ಕ್ರಮ ಕೈಗೊಳ್ಳುವ ಜೊತೆಗೆ ಕಾಮಗಾರಿಯನ್ನು ಮುಂದುವರಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ನಡುವೆಯು ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ನಡೆಯುತ್ತಿದೆ. ನನ್ನ ಕ್ಷೇತ್ರದಲ್ಲಿಯೇ ಕಳೆದ ಒಂದುವರೆ ವರ್ಷದಿಂದ ೨೫೦ ಕೋಟಿ ರು.ಗಳ ಕಾಮಗಾರಿ ನಡೆಯುತ್ತಿದೆ. ವಿಪಕ್ಷಗಳ ವೃಥ ಟೀಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತವೆ. ಈ ಬಾರಿಯು ಸಹ ಸಿಎಂ ಸಿದ್ದರಾಮಯ್ಯ ೧೬ನೇ ಬಜೆಟ್ ಮಂಡಿಸಿ ದಾಖಲೆ ಮಾಡುವ ಜೊತೆಗೆ ವಿವಿಧ ಅಭಿವೃದ್ದಿ ಯೋಜನೆಗಳನ್ನು ಅನುದಾನವನ್ನು ನೀಡಿದ್ದಾರೆ. ಗ್ಯಾರಂಟಿಗೂ ೫೧ ಸಾವಿರ ಕೋಟಿ ರು.ಗಳನ್ನು ನೀಡಿದ್ದರು ಸಹ ರಾಜ್ಯದ ಅಭಿವೃದ್ದಿಗೆ ತೊಂದರೆಯಾಗಿಲ್ಲ ಎಂದು ಕೃಷ್ಣಮುರ್ತಿ ಸ್ಪಷ್ಟಪಡಿಸಿದರು. ಕೆಂಪನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಮಾದೇಶ್ ಮಾತನಾಡಿ, ಕಳೆದ ಒಂದು ವರೆ ವರ್ಷದಿಂದ ಗ್ರಾ.ಪಂ.ವ್ಯಾಪ್ಪಿಗೆಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಪಂಚಾಯಿತಿಗೆ ೬.೫೦ ಕೋಟಿ ರು.ಗಳ ಅನುದಾನವನ್ನು ನೀಡಿದ್ದಾರೆ. ಆಶ್ರಯ ಮನೆಗಳನ್ನು ಮಂಜೂರು ಮಾಡಿದ್ದಾರೆ. ಗ್ರಾಮವನ್ನು ಮಾದರಿ ಪಂಚಾಯಿತಿಯನ್ನಾಗಿಸಲು ಎಆರ್‌ಕೆ ಅವರು ಹೆಚ್ಚಿನ ಅದ್ಯತೆ ನೀಡಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಈ ಮುಳಕ ಅಭಿನಂದಿಸುವುದಾಗಿ ತಿಳಿಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ಪ್ರಭುಪ್ರಸಾದ್, ಜಿ.ಪಂ. ಮಾಜಿ ಉಪಾಧ್ಯಕ್ಷ ಯೋಗೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಗುರುಸಿದ್ದಪ್ಪ, ಕೆ.ಎಂ. ನಾಗರಾಜು ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ನಾಗೇಶ್.ರಾಮಸ್ವಾಮಿ, ಸೋಮಣ್ಣ, ಗ್ರಾಪಂ. ಮಾಜಿ ಅಧ್ಯಕ್ಷರಾದ ನಾಗಲಿಂಗನಾಯಕ, ಕೆಂಪನಪುರ ಪಿಎಸಿಸಿ ಅಧ್ಯಕ್ಷ ಶಿವಶಂಕರ್, ಎಪಿಎಂಸಿ ನಿರ್ದೇಶಕ ಹೊಮ್ಮದ ರವಿಶಂಕರ್, ಕೆ.ಎಂ. ಮಹದೇವಸ್ವಾಮಿ, ಕಂದಹಳ್ಳಿ ನಂಜುಂಡಸ್ವಾಮಿ, ಎಇಇ ರಮೇಶ್, ಕೆಆರ್‌ಐಡಿಎಲ್ ಇಇ ಚಿಕ್ಕಲಿಂಗಯ್ಯ, ಗ್ರಾಮದ ನಿವೃತ್ತ ಅಧಿಕಾರಿಗಳಾದ ಚನ್ನಬಸಯ್ಯ, ಪುಟ್ಟಮಾದಯ್ಯ, ಪುಟ್ಟರಂಗಯ್ಯ, ಸಿ.ಗೋಪಾಲ್. ಕೆ. ಮರಿಬಸವಯ್ಯ, ಎಂ. ರಂಗಸ್ವಾಮಿ, ಎಂ.ರಾಜು ಮೊದಲಾದವರು ಇದ್ದರು.