ಇರುವೈಲು ದಿ. ಸುಲೋಚನ ಐ. ರಾಮ ಆಸ್ರಣ್ಣ ವೇದಿಕೆಯಲ್ಲಿ ಇರುವೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 75ನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

75ನೇ ವರ್ಷದ ಭಜನಾ ಮಂಗಲೋತ್ಸವದ ಸವಿನೆನಪಿಗಾಗಿ ದೇವಸ್ಥಾನದ ಸುತ್ತಲೂ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಸರ್ಕಾರ ಅಥವಾ ತನ್ನ ಸ್ವಂತ ಅನುದಾನದಿಂದ 25 ಲಕ್ಷ ರುಪಾಯಿ ಅನುದಾನ ನೀಡುವುದಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್ ಭರವಸೆ ನೀಡಿದರು.

ಅವರು ಮಂಗಳವಾರ ಇರುವೈಲು ದಿ. ಸುಲೋಚನ ಐ. ರಾಮ ಆಸ್ರಣ್ಣ ವೇದಿಕೆಯಲ್ಲಿ ನಡೆದ ಇರುವೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿಯ 75ನೇ ವರ್ಷದ ಭಜನಾ ಮಂಗಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಜನೆಯನ್ನು ಭಕ್ತಿಯಿಂದ ಹೇಗೆ ಹೇಳಿದರೂ ದೇವರಿಗೆ ಸಲ್ಲುತ್ತದೆ. ಭಜನೆಯು ನೇರವಾಗಿ ಭಕ್ತರಿಗೂ ಭಗವಂತನಿಗೂ ಇರುವ ಸಂಪರ್ಕ ಸೇತುವೆ. ಆದ್ದರಿಂದ ಮಕ್ಕಳು ಭಜನೆಯ ಕಡೆಗೆ ಒಲವು ತೋರಬೇಕು. ಭಜನೆಯಿಂದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವಾಗುತ್ತದೆ ಎಂದರು.

ದೇವಸ್ಥಾನದ ಆಡಳಿತಾಧಿಕಾರಿ ಇಂದು ಎಂ. ಅಧ್ಯಕ್ಷತೆ ವಹಿಸಿದ್ದರು. ದಾಮೋದರ ಶರ್ಮ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಗಣೇಶ್ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ಐ. ರಾಘವೇಂದ್ರ ಆಸ್ರಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಅವರನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷೆ ಲಲಿತಾ ಮುಗೇರ, ದೇವಸ್ಥಾನದ ಆಡಳಿತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಐ. ಕುಮಾ‌ರ್ ಶೆಟ್ಟಿ, ಉದ್ಯಮಿ ರಂಜಿತ್ ಪೂಜಾರಿ ಉಪಸ್ಥಿತರಿದ್ದರು. ಭಜನಾ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಮಾಜಿ ಮೊಕ್ತೇಸರ ಎನ್‌. ದಿವಾಕರ ಪ್ರಭು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.