ಕನ್ನಡಪ್ರಭ ವಾರ್ತೆ ರಾಮದುರ್ಗ
ಶಾಸಕರು ಬೆಂಗಳೂರಿನಲ್ಲಿಯೇ ಕಾಲಹರಣ ಮಾಡುತ್ತಾರೆ ಎಂದು ವಿರೋಧ ಪಕ್ಷದವರು ಆಕ್ಷೇಪಿಸುತ್ತಾರೆ. ಆದರೆ ರಾಮದುರ್ಗದಲ್ಲಿ ಕುಳಿತುಕೊಂಡರೆ ಅಭಿವೃದ್ಧಿಪರ ಯೋಜನೆಗಳನ್ನು ಹೊತ್ತು ತರಲು ಸಾಧ್ಯವೇ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಪ್ರಶ್ನಿಸಿದರು.ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಶಾಸಕರು ತಮ್ಮಷ್ಟು ಅಭಿವೃದ್ಧಿ ಮಾಡಿಲ್ಲ. ಕಾರಣ ಅವರು ಕೇವಲ ರಾಮದುರ್ಗದಲ್ಲಿ ಇರುತ್ತಿದ್ದರು. ರಾಮದುರ್ಗದ ಜನತೆಗೆ ಕಷ್ಟಗಳು ಎದುರಾದರೆ ನಮ್ಮ ಕಾರ್ಯಕರ್ತರು ಬಗೆ ಹರಿಸುತ್ತಾರೆ. ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತ್ಯುತ್ತರ ನೀಡಿದರು.ಸುರೇಬಾನ ಠಾಣಾ ವ್ಯಾಪ್ತಿಯ ಜನರಿಗೆ ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ರಾಮದುರ್ಗ ಠಾಣೆಯ ಕೆಲವು ಹಳ್ಳಿಗಳನ್ನು ಒಡೆದು ಸುರೇಬಾನ ಠಾಣೆ ಸ್ಥಾಪಿಸಲಾಗಿದೆ. ದೂರದ ರಾಮದುರ್ಗಕ್ಕೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಜರುಗಿಸಲಾಗಿದೆ. ₹ 1.82 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಠಾಣೆ ನಿರ್ಮಾಣಗೊಳ್ಳಲಿದೆ. ಗ್ರಾಮ ಪಂಚಾಯತಿಗಳಾಗಿದ್ದ ಸುರೇಬಾನ ಮತ್ತು ಮನಿಹಾಳ ಪಂಚಾಯತಿಗಳನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತಿ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬಹುದಾಗಿದೆ. ಪಟ್ಟಣ ಪಂಚಾಯತಿಗೆ ಸಿಬ್ಬಂದಿ ನೇಮಿಸಿ ಅಗತ್ಯ ಸೌಲಭ್ಯ ಕಲ್ಪಿಸುವದಾಗಿ ತಿಳಿಸಿದರು.ಆತ್ಮಹತ್ಯೆ, ಅಪಘಾತದಲ್ಲಿ ಪ್ರಾಣ ಹಾನಿಯಾಗಿದ್ದಾಗ ಕಡ್ಡಾಯವಾಗಿ ಶವ ಪರೀಕ್ಷೆ ನಡೆಸುವುದು ಸೂಕ್ತ. ಆದರೆ, ನಮ್ಮ ಬೆಂಬಲಿಗರು ಶವ ಪರೀಕ್ಷೆಗೆ ಅವಕಾಶ ಕೊಡದಂತೆ ತಮ್ಮನ್ನು ಪೀಡಿಸುತ್ತಾರೆ. ಜನಕ್ಕೆ ಎಷ್ಟು ಹೇಳಿದರೂ ಉಪಯುಕ್ತವಾಗುವುದಿಲ್ಲ. ಹೆಲ್ಮೆಟ್ ಕಡ್ಡಾಯ ಮಾಡಿದ ಪೊಲೀಸರಿಗೆ ಗಾಡಿ ಬಿಡುವಂತೆ ಕೆಲವರು ಬಿಂಬಾಲು ಬೀಳುತ್ತಾರೆ. ಹೆಲ್ಮೆಟ್ ಧರಿಸಿದರೆ ಸವಾರರ ಜೀವ ಉಳಿಯುತ್ತದೆ ಎನ್ನುವ ಪರಿಜ್ಞಾನವೂ ಕೆಲವರಿಗೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾತನಾಡಿ, ಸುರೇಬಾನ ಪೊಲೀಸ್ ಠಾಣೆ ಶಾಸಕರ ಕನಸಿನ ಕೂಸಾಗಿದೆ. ಗುತ್ತಿಗೆದಾರರು ತಮ್ಮ ಲಾಭಕ್ಕಾಗಿ ಕಟ್ಟಡ ನಿರ್ಮಿಸದೇ ಇದು ತಮ್ಮೂರಿನ ಠಾಣೆ ಎಂದು ಗುಣಮಟ್ಟದ ಕಾಮಗಾರಿ ಮಾಡುವಂತೆ ತಿಳಿಸಿದರು.ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಠಾಣಾ ಸಿಬ್ಬಂದಿ ಉತ್ತಮ ಕೆಲಸಗಳನ್ನು ಮಾಡಬೇಕು. ಜನಸ್ನೇಹಿ ಪೊಲೀಸ್ ಠಾಣೆಯಾಗಲು ಎಲ್ಲ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಠಾಣೆ ಎಂದರೆ ಜನರಿಗೆ ಭಯ ಬರದೆ ಅಭಿಮಾನ ಬರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಪರಪ್ಪ ಜಂಗವಾಡ, ಗಿರಿಯಪ್ಪ ಹನಸಿ, ಗ್ರಾಪಂ ಅಧ್ಯಕ್ಷ ಅಶೋಕ ದಂಡಗಿ, ಜಿಪಂ ಮಾಜಿ ಸದಸ್ಯ ಜಹೂರ ಹಾಜಿ, ಜಿ.ಬಿ. ರಂಗನಗೌಡರ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಪಿಎಸ್‌ಐಗಳಾದ ಗುರುರಾಜ ಕಲ್ಬುರ್ಗಿ, ಸವಿತಾ ಮುನ್ಯಾಳ ಸೇರಿ ಇತರರಿದ್ದರು. ಸಿಪಿಐ ವಿನಾಯಕ ಬಡಿಗೇರ ಸ್ವಾಗತಿಸಿ, ವಂದಿಸಿದರು.ಕ್ಷೇತ್ರದಲ್ಲೇ ಕುಳಿತರೇ ಯೋಜನೆ ತರಲು ಸಾಧ್ಯವೇ?
ಕನ್ನಡಪ್ರಭ ವಾರ್ತೆ ರಾಮದುರ್ಗ ಶಾಸಕರು ಬೆಂಗಳೂರಿನಲ್ಲಿಯೇ ಕಾಲಹರಣ ಮಾಡುತ್ತಾರೆ ಎಂದು ವಿರೋಧ ಪಕ್ಷದವರು ಆಕ್ಷೇಪಿಸುತ್ತಾರೆ. ಆದರೆ ರಾಮದುರ್ಗದಲ್ಲಿ ಕುಳಿತುಕೊಂಡರೆ ಅಭಿವೃದ್ಧಿಪರ ಯೋಜನೆಗಳನ್ನು ಹೊತ್ತು ತರಲು ಸಾಧ್ಯವೇ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಪ್ರಶ್ನಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.