ನಮ್ಮ ಮೆಟ್ರೋ 3ನೇ ಹಂತ ಯೋಜನೆ ವಿಳಂಬ?

| Published : Aug 31 2025, 01:08 AM IST

ಸಾರಾಂಶ

ಜೆ.ಪಿ.ನಗರ 4ನೇ ಹಂತ-ಕೆಂಪಾಪುರ, ಹೊಸಹಳ್ಳಿ-ಕಡಬಗೆರೆ ಸಂಪರ್ಕಿಸಲಿರುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ (ಕಿತ್ತಳೆ ಮಾರ್ಗ) ಡೆಡ್‌ಲೈನ್‌ ಮುಂದೂಡಿಕೆಯಾಗಿದೆ. ಪರಿಣಾಮವಾಗಿ ಯೋಜನಾ ವೆಚ್ಚ ಶೇ.5ರಷ್ಟು ಹೆಚ್ಚುವ ಸಾಧ್ಯತೆಯಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೆ.ಪಿ.ನಗರ 4ನೇ ಹಂತ-ಕೆಂಪಾಪುರ, ಹೊಸಹಳ್ಳಿ-ಕಡಬಗೆರೆ ಸಂಪರ್ಕಿಸಲಿರುವ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ (ಕಿತ್ತಳೆ ಮಾರ್ಗ) ಡೆಡ್‌ಲೈನ್‌ ಮುಂದೂಡಿಕೆಯಾಗಿದೆ. ಪರಿಣಾಮವಾಗಿ ಯೋಜನಾ ವೆಚ್ಚ ಶೇ.5ರಷ್ಟು ಹೆಚ್ಚುವ ಸಾಧ್ಯತೆಯಿದೆ.

ಇದೇ ಆಗಸ್ಟ್‌ 10ರಂದು ಪ್ರಧಾನಿ ಮೋದಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಮೂಲಗಳ ಪ್ರಕಾರ ಕಿತ್ತಳೆ ಮಾರ್ಗದ ಕಾಮಗಾರಿ ಐದೂವರೆ ವರ್ಷ ತೆಗೆದುಕೊಳ್ಳಲಿದ್ದು, ಮುಕ್ತಾಯದ ಅವಧಿ 2031ರ ಮೇ ತನಕ ವಿಸ್ತರಣೆಯಾಗಿದೆ. ಕಾಮಗಾರಿಯ ಟೆಂಡರ್‌ ಈ ವರ್ಷ ನವೆಂಬರ್‌ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದ್ದು, ಡಿಸೆಂಬರ್ - ಜನವರಿ ಹೊತ್ತಿಗೆ ಕಾಮಗಾರಿ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ಈ ಮೊದಲು 2029 ಅಥವಾ 2030ರ ಮಧ್ಯಂತರದಲ್ಲಿ 3ನೇ ಹಂತದ ಯೋಜನೆಯನ್ನು ಮುಗಿಸಲು ನಿರ್ಧರಿಸಲಾಗಿತ್ತು. ಆದರೆ, ಟ್ರಾಫಿಕ್‌ ನಿವಾರಣೆ ದೃಷ್ಟಿಯಿಂದ ಎರಡೂ ಕಾರಿಡಾರ್‌ನಲ್ಲಿ ಹೆಚ್ಚುವರಿಯಾಗಿ ಡಬಲ್‌ ಡೆಕ್ಕರ್‌ ನಿರ್ಮಿಸಲು ಉದ್ದೇಶಿಸಲಾಯಿತು. ಇದರಿಂದ ಯೋಜನಾ ಕಾಮಗಾರಿ ಅವಧಿ ಹೆಚ್ಚಾಗಿದೆ. ಕಾಮಗಾರಿ ನಡೆವ ಅವಧಿಯಲ್ಲಿ ಡೆಡ್‌ಲೈನ್‌ ಇನ್ನಷ್ಟು ಮುಂದೂಡಿಕೆ ಆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ 3ನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ 2021ರಲ್ಲಿ ಒಪ್ಪಿಗೆ ಕೊಟ್ಟು ಡಿಪಿಆರ್‌ನ್ನು ಕೇಂದ್ರಕ್ಕೆ ಕಳಿಸಿತ್ತು. ಕೇಂದ್ರ ಸರ್ಕಾರ ಕಳೆದ ವರ್ಷ ಅನುಮೋದನೆ ನೀಡಿತ್ತು. ₹15611 ಕೋಟಿ ಯೋಜನೆಯ ಮೂಲ ಅಂದಾಜು ವೆಚ್ಚವಾಗಿದ್ದು ವಿಳಂಬದಿಂದ ಈ ವೆಚ್ಚ ಶೇ. 5 ಅಥವಾ ಅದಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಬಿಎಂಆರ್‌ಸಿಎಲ್‌ಗೆ ಸದ್ಯ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳನ್ನು ಪೂರ್ಣಗೊಳಿಸಿದ ಅನುಭವ ಇದೆ. ಜತೆಗೆ ನೀಲಿ ಮಾರ್ಗದ ಕಾಮಗಾರಿ ನಡೆಸಲಾಗುತ್ತಿದೆ. ಇದು ಮುಂದಿನ ಹೊಸ ಯೋಜನೆ ಕೈಗೆತ್ತಿಕೊಳ್ಳಲು ಹಾಗೂ ಆದಷ್ಟು ವಿಳಂಬ ಆಗದಂತೆ ಕಾಮಗಾರಿ ನಡೆಸಲು ನೆರವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಹಳದಿ ಮಾರ್ಗದಲ್ಲಿ ಆರ್‌.ವಿ.ರಸ್ತೆ - ಕೇಂದ್ರ ರೇಷ್ಮೆ ಮಂಡಳಿವರೆಗೆ ಡಬಲ್‌ ಡೆಕ್ಕರ್‌ ಇದೆ. ಇದೇ ಮಾದರಿಯನ್ನು ಕಿತ್ತಳೆ ಮಾರ್ಗದುದ್ದಕ್ಕೂ ಅಳವಡಿಸಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್‌, ಹೈದರಾಬಾದ್‌ ಮೂಲದ ಮೂಲಸೌಕರ್ಯ ಸಲಹಾ ಸಂಸ್ಥೆ ‘ಆರ್‌ವಿ ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ ಎಂಜಿನಿಯರ್ಸ್‌ ಮತ್ತು ಕನ್ಸಲ್ಟೆಂಟ್ಸ್‌ ಪ್ರೈವೆಟ್‌ ಲಿಮಿಟೆಡ್‌ನಿಂದ ಕಾರ್ಯಸಾಧ್ಯತಾ ವರದಿ ಪಡೆದಿದೆ.

ಡಬಲ್‌ ಡೆಕ್ಕರ್‌ನಲ್ಲಿ ಎಲ್ಲಿಯೂ ಟ್ರಾಫಿಕ್‌ ಸಿಗ್ನಲ್‌ ಬರುವುದಿಲ್ಲ. ಮೇಲ್ಸೇತುವೆಯಲ್ಲಿ ವಾಹನಗಳು ಸರಾಗವಾಗಿ ಹೋಗುತ್ತವೆ. ಇದರಿಂದ ಹೆಬ್ಬಾಳ, ಕಾಮಾಕ್ಯ ಜಂಕ್ಷನ್‌, ಜೆ.ಪಿ.ನಗರ ಸೇರಿ ಇತರೆಡೆ ಕೆಳರಸ್ತೆಯಲ್ಲಿ ವಾಹನದಟ್ಟಣೆಯ ಒತ್ತಡ ತಗ್ಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ಇನ್ನು ಮೂರನೇ ಹಂತದ ಯೋಜನೆಯ ಜಿಯೋಟೆಕ್ನಿಕಲ್ ಸರ್ವೆಯನ್ನು ಬಿಎಂಆರ್‌ಸಿಎಲ್‌ ಪೂರ್ಣಗೊಳಿಸಿದೆ. ಯೋಜನೆಗಾಗಿ 6,72,117 ಚ.ಮೀ. ಭೂಸ್ವಾಧೀನದ ಅಗತ್ಯವಿದ್ದು, ಈಗಾಗಲೆ ಭೂಸ್ವಾಧೀನ ಆರಂಭಿಸಲಾಗಿದೆ. ಕೆಲ ಮೂಲಸೌಕರ್ಯ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಡಬಲ್‌ ಡೆಕ್ಕರ್‌ನಲ್ಲಿ ಮೆಟ್ರೋ ಮಾರ್ಗ, ಮೇಲಿನ ರಸ್ತೆಯ ನಿರ್ಮಾಣವನ್ನು ಒಬ್ಬರೇ ಗುತ್ತಿಗೆದಾರರು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ವಿಸ್ತ್ರತ ವಿನ್ಯಾಸ ಸಲಹೆಯನ್ನು (ಡಿಡಿಸಿ) ಪಡೆದುಕೊಳ್ಳಲಾಗಿದೆ ಮೆಟ್ರೋ ಉನ್ನತಾಧಿಕಾರಿಗಳು ಎಂದು ತಿಳಿಸಿದರು.

ಯೋಜನೆಯ ಕಾಮಗಾರಿಗೆ 8 ಹಂತದಲ್ಲಿ ಟೆಂಡರ್‌ ಕರೆಯಲಾಗುವುದು, ನಿಲ್ದಾಣ, ವಯಡಕ್ಟ್‌, ಡಿಪೋಗಳು ನಾಲ್ಕು ಪ್ಯಾಕೇಜ್‌ನಲ್ಲಿ ಸೇರಿಲಿದ್ದು, ಸರ್ಕಾರದ ಅನುದಾನದಲ್ಲಿ ನಿರ್ಮಾಣ ಆಗಲಿದೆ. ನವೆಂಬರ್‌ ಹೊತ್ತಿಗೆ ಜಪಾನ್‌ ಇಂಟರ್‌ನ್ಯಾಷನಲ್‌ ಕೊಆಪರೇಷನ್‌ ಏಜೆನ್ಸಿ (ಜೈಕಾ) ನೆರವಿನ ₹ 6,770 ಸಾಲದ ಒಪ್ಪಂದ ಏರ್ಪಡಲಿದ್ದು, ಅದರಲ್ಲಿ ರೈಲ್ವೆಬೋಗಿ ವೆಚ್ಚ ಸೇರಿ ಉಳಿದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.