ರಾಜ್ಯದಲ್ಲಿ ಇದುವರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರವೇ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಇದ್ದು, ಲೋಕಸಭೆ, ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯದಿರುವುದರಿಂದ ರಾಜಕೀಯ ಹಿನ್ನಡೆ ಉಂಟಾಗಿದೆ. ಈ ಸಮುದಾಯಗಳಿಗೆ ರಾಜಕೀಯ ನ್ಯಾಯ ಸಿಗಬೇಕಾದರೆ ಮೀಸಲಾತಿ ಅನಿವಾರ್ಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಅ.30ರಂದು ನಗರದ ಬಿ.ಆರ್.ಅಂಬೇಡ್ಕರ್ ಭವನದ ಮಿನಿ ಸಭಾಂಗಣದಲ್ಲಿ ಲೋಕಸಭೆ, ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡವೇ ಎಂಬ ವಿಷಯ ಕುರಿತ ವಿಚಾರ ಚಿಂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರೊಡಗೂಡಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಯಕ ಸಮಾಜಗಳ ಸಂಸ್ಥಾಪಕ ಪುಟ್ಟಸಿದ್ದಶೆಟ್ಟಿ ಉದ್ಘಾಟಿಸುವರು. ವಿವಿಧ ಸಂಘಟನೆಗಳ ಮುಖಂಡರು ಹಿಂದುಳಿದ ವರ್ಗಗಳ ಹೋರಾಟಗಾರರು ಭಾಗವಹಿಸುವರು ಎಂದು ವಿವರಿಸಿದರು.
ರಾಜ್ಯದಲ್ಲಿ ಇದುವರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರವೇ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಇದ್ದು, ಲೋಕಸಭೆ, ವಿಧಾನ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯದಿರುವುದರಿಂದ ರಾಜಕೀಯ ಹಿನ್ನಡೆ ಉಂಟಾಗಿದೆ. ಈ ಸಮುದಾಯಗಳಿಗೆ ರಾಜಕೀಯ ನ್ಯಾಯ ಸಿಗಬೇಕಾದರೆ ಮೀಸಲಾತಿ ಅನಿವಾರ್ಯ ಎಂದು ಪ್ರತಿಪಾದಿಸಿದರು.ರಾಜ್ಯದ 1129 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ 183 ಕ್ಷೇತ್ರಗಳು ಹಿಂದುಳಿದ ವರ್ಗಗಳಿಗೆ ಮೀಸಲಾಗಿದೆ. ಅದೇ ರೀತಿ 3656 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ 508 ಕ್ಷೇತ್ರಗಳು ಹಿಂದುಳಿದ ವರ್ಗಗಳಿಗೆ ಮೀಸಲಾಗಿದೆ. ಈ ಕ್ಷೇತ್ರಗಳ ಮೂಲಕ ಹಿಂದುಳಿದ ಸಮುದಾಯಗಳು ರಾಜಕೀಯವಾಗಿ ಅಧಿಕಾರವನ್ನು ಹೊಂದಲು ಸಾಧ್ಯವಾಗುತ್ತದೆ. ಇದೇ ರೀತಿ ಲೋಕಸಭೆ, ವಿಧಾನ ಸಭೆಯಲ್ಲಿ ಮೀಸಲಾತಿ ದೊರೆತರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಹಿಂದುಳಿದ ಸಮುದಾಯಗಳಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವುದು, ಸಂಘಟನಾ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆರಂಭಿಕವಾಗಿ ಹಿಂದುಳಿದವರಲ್ಲಿ ಮೀಸಲಾತಿ ಕುರಿತು ಜಾಗೃತಿಯನ್ನು ಮೂಡಿಸಿ ಭವಿಷ್ಯದ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದು ವಿವರಿಸಿದರು.ಈ ವೇಳೆ ವಿವಿಧ ಸಂಘಟನೆಯ ಮುಖಂಡರಾದ ಎಂ. ಕೃಷ್ಣ, ಎಚ್.ಪಿ.ಸತೀಶ್, ಕರವೇ ಅಶೋಕ್, ಎನ್.ದೊಡ್ಡಯ್ಯ, ಅಮ್ಜದ್ಪಾಷ, ಮಂಚಶೆಟ್ಟಿ, ಆನಂದ್, ಸಿದ್ದಶೆಟ್ಟಿ, ಎಚ್.ಡಿ. ಜಯರಾಂ, ರಾಜು ಮತ್ತಿತರರಿದ್ದರು.