ಯುಜಿಡಿ ಚೇಂಬರ್ ಮುಚ್ಚೋಕೆ ವಿಶೇಷ ಅನುದಾನ ಬೇಕಾ

| Published : Apr 30 2024, 02:00 AM IST

ಸಾರಾಂಶ

ಸರ್ಕಾರಿ ಅನುದಾನ ತಂದು ಮನಸೋ ಇಚ್ಛೆ ಸುರಿದಿರುವ ಅಧಿಕಾರಿಗಳು ನಂತರ ನಿರ್ವಹಣೆ ವಿಚಾರ ಬಂದಾಗ ಕಣ್ಣು ಮುಚ್ಚಿ ಕುಳಿತಿದ್ದಾರೆ. ಪರಿಣಾಮ ನಿತ್ಯವೂ ದುರ್ಗದ ರಸ್ತೆಗಳಲ್ಲಿ ವಾಹನ ಚಾಲಕರು ಎದ್ದೂ, ಬಿದ್ದು ಹೋಗುವಂತಾಗಿದೆ.

ಚಿತ್ರದುರ್ಗ: ಕಳಪೆ ಸಿಸಿ ರಸ್ತೆಗಳು, ಡಿವೈಡರ್‌ಗಳು, ತೆರೆದ ಮ್ಯಾನ್‌ ಹೋಲ್‌ಗಳಿಂದ ಸದ್ಯಕ್ಕಂತೂ ಚಿತ್ರದುರ್ಗದ ಜನತೆಗೆ ಮುಕ್ತಿ ಸಿಕ್ಕಂತೆ ಕಾಣಿಸುತ್ತಿಲ್ಲ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ರಸ್ತೆಗಳು ಅಪಘಾತದ ಬ್ಲಾಕ್ ಸ್ಪಾಟ್‌ಗಳಾಗಿ ರೂಪಾಂತರಗೊಂಡಿವೆ. ಸರ್ಕಾರಿ ಅನುದಾನ ತಂದು ಮನಸೋ ಇಚ್ಛೆ ಸುರಿದಿರುವ ಅಧಿಕಾರಿಗಳು ನಂತರ ನಿರ್ವಹಣೆ ವಿಚಾರ ಬಂದಾಗ ಕಣ್ಣು ಮುಚ್ಚಿ ಕುಳಿತಿದ್ದಾರೆ. ಪರಿಣಾಮ ನಿತ್ಯವೂ ದುರ್ಗದ ರಸ್ತೆಗಳಲ್ಲಿ ವಾಹನ ಚಾಲಕರು ಎದ್ದೂ, ಬಿದ್ದು ಹೋಗುವಂತಾಗಿದೆ.

ಚಿತ್ರದುರ್ಗದ ಚಂದ್ರವಳ್ಳಿ ತಿರುವಿನಿಂದ ಹೊಳಲ್ಕೆರೆ ಕಡೆಗೆ ಹೋಗಲು ವಿಶಾಲವಾದ 100 ಅಡಿ ಅಗಲದ ರಸ್ತೆ ಮಾಡಲಾಗಿದ್ದು, ರಸ್ತೆ ಮಧ್ಯೆ ಆಳೆತ್ತರದ ಡಿವೈಡರ್‌ಗಳಿವೆ. ಈ ರಸ್ತೆಯಲ್ಲಿ ಬರುವ ಯುಜಿಡಿ ಮಾರ್ಗದ ಚೇಂಬರ್‌ಗಳ ಮೇಲೆ ಹಾಕಿರುವ ಪ್ಲೇಟ್‌ಗಳು ತುಂಡಾಗಿ ಬೀಳುತ್ತಿದ್ದು, ವಾಹನ ಚಾಲಕರಲ್ಲಿ ಭೀತಿ ಮೂಡಿಸಿವೆ.

ಜ್ಞಾನ ಭಾರತಿ ಶಾಲೆ ಸಮೀಪದ ರಸ್ತೆ ಮಧ್ಯೆ ಇರುವ ಯುಜಿಡಿ ಚೇಂಬರ್‌ನ ಪ್ಲೇಟ್ ಮುರಿದು ಎರಡು ತಿಂಗಳಾಗಿದೆ. ಎಸ್ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಅಷ್ಟೇ ಏಕೆ ನಿತ್ಯವೂ ಇದೇ ಮಾರ್ಗದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನೆಯಿಂದ ಕಚೇರಿಗೂ, ಕಚೇರಿಯಿಂದ ಮನೆಗೂ ಕಾರಲ್ಲಿ ಸಂಚರಿಸುತ್ತಾರೆ. ಅವರಿಗಾದರೂ ಇದು ಅತ್ಯಂತ ಅಪಾಯಕಾರಿ ಅಂತ ಅನ್ನಿಸದೇ ಇರುವುದು ಅಚ್ಚರಿ ತರಿಸಿದೆ.

ಯುಜಿಡಿ ಚೇಂಬರ್ ಪ್ಲೇಟ್ ಮುರಿದ ನಂತರ ರಾತ್ರಿ ವೇಳೆ ಹಲವು ಕಾರುಗಳ ಚಕ್ರ ಈ ಗುಂಡಿ ಇಳಿದು ಹೋಗಿವೆ. ಕೆಲವು ಕಾರುಗಳ ಟೈರ್‌ಗಳು ಸಿಡಿದಿವೆ. ಯುಜಿಡಿ ಚೇಂಬರ್‌ನ ಮ್ಯಾನ್ ಹೋಲ್ ತಪ್ಪಿಸಲು ಹೋಗಿ ಸಣ್ಣ ಪುಟ್ಟ ಅಪಘಾತಗಳೂ ಸಂಭವಿಸಿವೆ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೊನೆಗೆ ಜೀವ ಪ್ರೇಮಿಗಳು, ಮಾನವಂತ ಜನ ಈ ಗುಂಡಿಗೆ ಬಳ್ಳಾರಿ ಜಾಲಿ ಮುಳ್ಳು ತಂದು ಮುಚ್ಚಿ ವಾಹನ ಚಾಲಕರಿಗೆ ಮುಂದೆ ರಸ್ತೆಯಲ್ಲಿ ಗುಂಡಿ ಇದೆ ನಿಧಾನವಾಗಿ ಚಲಿಸಿ ಎಂಬ ಸಂದೇಶ ರವಾನಿಸಿದ್ದಾರೆ. ಪಂಕ್ಚರ್ ಅಂಗಡಿವರು ಒಂದೆರೆಡು ಹಳೇ ಟೈರ್‌ಗಳ ತಂದು ಗುಂಡಿ ಪಕ್ಕ ಇರಿಸಿ ಅಪಘಾತ ತಪ್ಪಿಸುವ ಸಂಬಂಧ ಮಾನವೀಯತೆ ಮೆರೆದಿದ್ದಾರೆ. ಅತ್ಯಂತ ದಟ್ಟ ವಾಹನ ಸಂಚಾರದ, ನಿತ್ಯವೂ ಶಿವಮೊಗ್ಗ, ಮಂಗಳೂರು, ಧರ್ಮಸ್ಥಳ, ಚಿಕ್ಕಮಗಳೂರು ಕಡೇ ಇದೇ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಇಂತಹ ರಸ್ತೆಗೆ ದುರ್ಗತಿ ಬಂದೊದಗಿದೆ. ಅಪಾಯಕಾರಿ ಮ್ಯಾನ್ ಹೋಲ್‌ಗಳು ಹೆಚ್ಚು ಕಡಿಮೆ ಚಿತ್ರದುರ್ಗದ ತುಂಬಾ ವಿಸ್ತೃತವಾಗಿ ಹರಡಿವೆ.

ಯುಜಿಡಿ ಚೇಂಬರ್‌ಗಳು ಮುಚ್ಚಿ ಅಂತ ಯಾರ ಗಮನಕ್ಕೆ ತರಬೇಕು ಅನ್ನೋದೆ ಜನರಿಗೆ ಸಮಸ್ಯೆಯಾಗಿದೆ. ಚಿತ್ರದುರ್ಗದ ಶಾಸಕರು ಎಲ್ಲಿರುತ್ತಾರೆ, ಯಾವಾಗ ಬರುತ್ತಾರೆ, ಅವರನ್ನು ಹೇಗೆ ಸಂಪರ್ಕಿಸೋದು ಎಂಬಿತ್ಯಾದಿ ರಗಳೆಗಳಲ್ಲಿಯೇ ಜನ ಮುಳುಗಿ ಹೋಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ರಸ್ತೆ ಸುರಕ್ಷತಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ಸಭೆ ಮಾಡುವುದು, ಯುಜಿಡಿ ಚೇಂಬರ್‌ಗಳ ಮುಚ್ಚಿ ಎಂದು ನಿರ್ದೇಶನ ನೀಡುವುದು ಮಾಮೂಲಿಯಾಗಿದೆ. ಡಿಸಿ, ಎಸ್ಪಿ ಮಾತುಗಳ ಯಾರು ಕೇಳುತ್ತಾರೆ, ಆದೇಶಗಳ ಪಾಲನೆ ಮಾಡುವ ಅಧಿಕಾರಿಗಳು ಚಿತ್ರದುರ್ಗದಲ್ಲಿ ಇದ್ದಾರಾ? ಅಪಘಾತಗಳು ಸಂಭವಿಸಿದರೆ ಆಗುವ ಪ್ರಾಣ ಹಾನಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಚಿತ್ರದುರ್ಗದ ಜನರಿಗೆ ಸದ್ಯ ಇರೋದು ಎರಡೇ ದಾರಿ. ಯುಜಿಡಿ ಚೇಂಬರ್ ಮುಚ್ಚಲು ವಿಶೇಷ ಅನುದಾನ ಕೊಡಿ ಎಂದು ಸಿಎಂಗೆ ಪತ್ರ ಬರೆಯುವುದು, ಇಲ್ಲವೇ ನಾಗರಿಕರಿಂದ ಡಬ್ಡಿ ಹಿಡಿದು ದೇಣಿಗೆ ಎತ್ತಿ ಚೇಂಬರ್‌ಗಳ ಮುಚ್ಚಿ ತಮ್ಮ ಪ್ರಾಣ ತಾವೇ ಕಾಪಾಡಿಕೊಳ್ಳುವುದು.