ಮುರುಡೇಶ್ವರ ಸಮುದ್ರದ ಮರಣ ಮೃದಂಗಕ್ಕೆ ಕೊನೆ ಎಂದು?

| Published : Dec 12 2024, 12:32 AM IST

ಮುರುಡೇಶ್ವರ ಸಮುದ್ರದ ಮರಣ ಮೃದಂಗಕ್ಕೆ ಕೊನೆ ಎಂದು?
Share this Article
  • FB
  • TW
  • Linkdin
  • Email

ಸಾರಾಂಶ

ಮುರುಡೇಶ್ವರ ಸಮುದ್ರ ಎಷ್ಟು ಚೆಂದವೂ ಅಷ್ಟೇ ಅಪಾಯಕಾರಿ ಎನ್ನುವುದು ಇಲ್ಲಿ ವರ್ಷಂಪ್ರತಿ ನಡೆಯುವ ಮರಣ ಮೃದಂಗವೇ ಸಾಕ್ಷಿಯಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಸಾವು ಕಟ್ಟಿಟ್ಟ ಬುತ್ತಿ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರೇ ಇಲ್ಲಿ ಹೆಚ್ಚು ಬಲಿಯಾಗುತ್ತಿದ್ದಾರೆ.

ರಾಘವೇಂದ್ರ ಹೆಬ್ಬಾರ್

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ನಾಲ್ವರು ಪ್ರವಾಸಿ ವಿದ್ಯಾರ್ಥಿನಿಯರು ಸಾವಿಗೀಡಾಗುವುದರ ಮೂಲಕ ಮರಣ ಮೃದಂಗ ಮುಂದುವರಿದಿರುವುದು ಆತಂಕ ತಂದಿದೆ. ಸರ್ಕಾರ, ಪ್ರವಾಸೋದ್ಯಮ ಇಲಾಖೆ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವುದೇ ಮುರುಡೇಶ್ವರ ಸಮುದ್ರದಲ್ಲಿ ಪದೇ ಪದೇ ಅವಘಡಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಮುರುಡೇಶ್ವರ ಸಮುದ್ರ ಎಷ್ಟು ಚೆಂದವೂ ಅಷ್ಟೇ ಅಪಾಯಕಾರಿ ಎನ್ನುವುದು ಇಲ್ಲಿ ವರ್ಷಂಪ್ರತಿ ನಡೆಯುವ ಮರಣ ಮೃದಂಗವೇ ಸಾಕ್ಷಿಯಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಸಾವು ಕಟ್ಟಿಟ್ಟ ಬುತ್ತಿ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರೇ ಇಲ್ಲಿ ಹೆಚ್ಚು ಬಲಿಯಾಗುತ್ತಿದ್ದಾರೆ.

ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಮುರುಡೇಶ್ವರದ ಸೊಬಗನ್ನು ವೀಕ್ಷಿಸಲು ಖುಷಿ ಖುಷಿಯಾಗಿಯೇ ಬರುವ ಪ್ರವಾಸಿಗರು ಇಲ್ಲಿನ ಸಮುದ್ರದ ಆಳ ತಿಳಿಯದೇ ಈಜಲು, ಆಟವಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವುದು ತೀರಾ ಆತಂಕಕಾರಿಯಾಗಿದೆ. ತಮ್ಮೂರಿನ ಕೆರೆಯೋ, ಕೆನಾಲ್‌ನಲ್ಲೋ ಈಜಿ ಅಲ್ಪ ಸ್ವಲ್ಪ ಅನುಭವ ಹೊಂದಿ ಮುರುಡೇಶ್ವರ ಪ್ರವಾಸಕ್ಕೆ ಬಂದು ಇಲ್ಲಿನ ಸಮುದ್ರಕ್ಕೆ ಈಜಲು ಇಳಿಯುವ ಪ್ರವಾಸಿಗರಿಗೆ ಇಲ್ಲಿನ ಆಳ, ಅಲೆಗಳ ಆರ್ಭಟದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಸಮುದ್ರ ನೋಡಿದ ಖುಷಿಗೆ ಒಮ್ಮೇಲೆ ಆಳಕ್ಕೆ ನುಗ್ಗುವುದರಿಂದಲೇ ಅವಘಡ ಸಂಭವಿಸಲು ಪ್ರಮುಖ ಕಾರಣವಾಗಿದೆ.ಸಮುದ್ರಕ್ಕೆ ಆಟವಾಡಲು ಹೋಗುವ ಪ್ರವಾಸಿಗರಿಗೆ ಪೊಲೀಸರು, ಲೈಪ್ ಗಾರ್ಡ್‌ ಸಿಬ್ಬಂದಿ, ಸ್ಥಳೀಯ ಮೀನುಗಾರರು ಸಾಕಷ್ಟು ಎಚ್ಚರಿಕೆ ನೀಡುತ್ತಾರೆ. ಆದರೆ ಪ್ರವಾಸಿಗರು ಇವರ ಮಾತನ್ನು ಕೇಳದೇ ಹುಂಬ ಧೈರ್ಯದಿಂದ ಈಜಲು ಇಳಿದು ಅಪಾಯಕ್ಕೆ ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.

ಮುರ್ಡೇಶ್ವರ ಸಮುದ್ರ ಕಿನಾರೆಯ ಕೆಲವು ಪ್ರದೇಶಗಳನ್ನು ಮಾತ್ರ ಪ್ರವಾಸಿಗರಿಗೆ ಸೀಮಿತಗೊಳಿಸಿ ಅಲ್ಲಿ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕಾಗಿದೆ.ಪ್ರವಾಸಿಗರಲ್ಲಿ ಲೈಫ್ ಜಾಕೆಟ್ ಹಾಕದೇ ಇರುವವರಿಗೆ ಹೆಚ್ಚಿನ ದಂಡದ ಹಣ ಹಾಕಿದಲ್ಲಿ ನಿಯಂತ್ರಣ ಸಾಧ್ಯ. ಲೈಪ್ ಜಾಕೆಟ್ ಇಲ್ಲದೇ ಯಾವುದೇ ಕಾರಣಕ್ಕೂ ನೀರಿಗಿಳಿಯಲು ಬಿಡಬಾರದು. ಮುರುಡೇಶ್ವರ ಘಟನೆ ರಾಜ್ಯಾದ್ಯಂತ ಸುದ್ದಿಯಾದ ಹಿನ್ನೆಲೆ ಜಿಲ್ಲಾಡಳಿತದ ಅಧಿಕಾರಿಗಳು ಮುರುಡೇಶ್ವರಕ್ಕೆ ಓಡಿ ಬರುವಂತಾಗಿದೆ. ಇನ್ನಾದರೂ ಈ ಅಧಿಕಾರಿಗಳು ಅವಘಡ ಉಂಟಾಗದಂತೆ ಮುಂಜಾಗ್ರತಾಕ್ರಮ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.