ಕೆಟ್ಟಿರುವ ಶುದ್ಧ ನೀರಿನ ಘಟಕ ಮೋಕ್ಷವಿಲ್ಲವೆ?

| Published : Apr 03 2024, 01:33 AM IST

ಸಾರಾಂಶ

ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಸಾವಿರಾರು ಅಡಿಗಳ ಆಳದವರೆಗೂ ಕೊರೆಸಿರುವ ಬೋರ್‌ವೆಲ್‌ಗಳಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು, ಈ ನೀರನ್ನು ಕುಡಿಯುತ್ತಿರುವ ಜನ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರ ಗ್ರಾಮೀಣ ಪ್ರದೇಶದ ಜನರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದೆ ಆದರೆ ಅವು ಕೆಟ್ಟು ವರ್ಷ ಕಳೆದರೂ ದುರಸ್ಥಿ ಭಾಗ್ಯವಿಲ್ಲದೆ ಜನ ಪ್ಲೋರೈಡ್ ಯುಕ್ತ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕೋಲಾರ ಜಿಲ್ಲೆಯಲ್ಲಿನ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲೋರೈಡ್ ಅಂಶ ಇದ್ದು, ಪ್ಲೋರೈಡ್ ಮುಕ್ತ ನೀರನ್ನು ಜನತೆಗೆ ಪೂರೈಸಲು ಸರ್ಕಾರ ಲಕ್ಷಾಂತರ ರೂ ಖರ್ಚು ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆದಿದೆ. ಆದರೆ ತಾಲೂಕಿನ ಗುಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಾತರಾಮಗೊಳ್ಳ, ಗುಟ್ಟಹಳ್ಳಿ, ಬೊಪ್ಪನಹಳ್ಳಿ,ಪೊಲೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಳವಡಿಸಿರುವ ಘಟಕಗಳು ಕೆಟ್ಟು ವರ್ಷ ಕಳೆದಿದೆ. ಆದರೆ ದುರಸ್ತಿಪಡಿಸಲು ಮುಂದಾಗಲಿಲ್ಲ.ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಸಾವಿರಾರು ಅಡಿಗಳ ಆಳದವರೆಗೂ ಕೊರೆಸಿರುವ ಬೋರ್‌ವೆಲ್‌ಗಳಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು, ಈ ನೀರನ್ನು ಕುಡಿಯುತ್ತಿರುವ ಜನ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸರಕಾರ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಳವಡಿಸಿದ್ದು, ಖಾಸಗಿ ಸಂಸ್ಥೆಗೆ ನೀಡಿದ ಅವಧಿಯ ಒಳಗೆ ಘಟಕ ಕೆಟ್ಟರೆ ದುರಸ್ತಿ ಮಾಡಿಸಬೇಕಾದ ಜವಾಬ್ದಾರಿ ಸಹ ಆಯಾ ಸಂಸ್ಥೆಗಳಿಗೇ ಆಗಿರುತ್ತದೆ. ಬಡವರಿಗೆ ನೀರಿನ ತೊಂದರೆ

ವಾಹನ ಸೌಲಭ್ಯ ಇರುವಂತಹ ಕೆಲವರು ದೂರದ ಊರುಗಳಿಂದ ಶುದ್ದೀಕರಿಸಿದ ನೀರನ್ನು ತಂದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಆದರೆ ಬಡ ವರ್ಗದ ಜನಕ್ಕೆ ಕುಡಿಯಲು ಶುದ್ದ ನೀರು ಸಿಗುತ್ತಿಲ್ಲ. ಇತ್ತ ಘಟಕದಲ್ಲಿ ಅಳವಡಿಸಿರುವ ಯಂತ್ರಗಳು ಬಳಕೆಯಾಗದ ಕಾರಣ ತುಕ್ಕು ಹಿಡಿಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ ನಷ್ಟ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕೋಟ್

ಶುದ್ದ ಕುಡಿಯುವ ನೀರಿನ ಘಟಕಗಳನ್ನು ಖಾಸಗಿ ಸಂಸ್ಥೆಯವರು ಟೆಂಡರ್ ಮೂಲಕ ಪಡೆದು ಅಳವಡಿಸಿದ್ದಾರೆ. ಅವುಗಳ ದುರಸ್ತಿ ಮಾಡಬೇಕಾದ ಹೊಣೆ ಅವರಿಗೆ ಸೇರಿದೆ. ಇದೂವರೆಗೂ ಯಾವ ಸಂಸ್ಥೆಯೂ ಪಂಚಾಯ್ತಿಗೆ ಘಟಕಗಳನ್ನು ಹಸ್ತಾಂತರ ಮಾಡಿಲ್ಲ. ಮುಂದಿನ ಸಭೆಗೆ ಟೆಂಡರ್ ಪಡೆದವರನ್ನು ಕರೆಸಿ ಘಟಕಗಳನ್ನು ಸರಿಪಡಿಸಲಾಗುತ್ತದೆ ಮತ್ತು ಬೇಸಿಗೆಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.----ಭವ್ಯ ಗ್ರಾ.ಪಂ ಅಧ್ಯಕ್ಷೆ, ಗುಲ್ಲಹಳ್ಳಿ.