ಸಾರಾಂಶ
ಚಿಕ್ಕಮಗಳೂರು : ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದಿಯೋ, ಇಲ್ವೋ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಇದೆ ಅಂದ್ರೆ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಗೋ ಹತ್ಯೆ ಹೇಗಾಗುತ್ತೆ, ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಬರೀ ನೇತ್ರಾವತಿ ಮಾತ್ರವಲ್ಲ, ರಾಜ್ಯದ ಉದ್ದಗಲಕ್ಕೂ ಇದೇ ಪರಿಸ್ಥಿತಿ ಇದೆ. ಧರ್ಮಸ್ಥಳ ಲಕ್ಷಾಂತರ ಭಕ್ತರು ಬರುವ ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಅನ್ನೋದು ದುಷ್ಟ ಮನಸ್ಥಿತಿಯ ಮತಾಂಧತೆ ತೋರಿಸುತ್ತೆ ಎಂದರು.
ಗೋ ಮಾಂಸ ಪತ್ತೆಯಾಗಿರುವುದು ನೋಡಿದರೆ ಗೋ ಹತ್ಯೆ ಕಾಯ್ದೆಯನ್ನ ಸರ್ಕಾರ ಸರಿಯಾಗಿ ಅನುಷ್ಠಾನ ಮಾಡ್ತಿಲ್ಲ ಅಂತಾಯ್ತು, ಗೋ ಕಳ್ಳರು ರಸ್ತೆ, ಕೊಟ್ಟಿಗೆಯಲ್ಲಿರೋ ಹಸುಗಳನ್ನೂ ಬಿಡ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗೋ ಕಳ್ಳರು ನಮ್ಮದೆ ಸರ್ಕಾರವೆಂದು ರಾಜಾರೋಷವಾಗಿ ಗೋ ಹತ್ಯೆ, ಗೋ ಕಳ್ಳತನ ಮಾಡುತ್ತಿದ್ದಾರೆ ಎಂದು ಹೇಳಿದರು.
-- ಬಾಕ್ಸ್--ಕಾನೂನು ಪ್ರಕಾರ ಮಾಡ್ತೀನಿವಿಧಾನ ಪರಿಷತ್‌ನಲ್ಲಿ ಸಿ.ಟಿ. ರವಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಾರೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈವರೆಗೆ ಯಾವುದೇ ದೂರು ಅಥವಾ ಸಾಕ್ಷ್ಯಾಧಾರ ನೀಡಿಲ್ಲ ಎಂದು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿ.ಟಿ. ರವಿ, ಅವರ ಬಗ್ಗೆ ಮಾತನಾಡಲು ಬಯಸಲ್ಲ, ಕಾನೂನಿನ ಪ್ರಕಾರ ಏನು ಮಾಡಬೇಕು ಮಾಡ್ತೀನಿ ಎಂದು ಹೇಳಿದರು.
ನಾನು ಕೊಟ್ಟಿರುವ ದೂರಿಗೆ ಇಂದಿಗೂ ಎಫ್.ಐ.ಆರ್ ಆಗಿಲ್ಲ. ಕಾನೂನು ಕಾಂಗ್ರೆಸ್, ಬಿಜೆಪಿಗೆ ಒಂದೊಂದು ಇಲ್ಲ. ನನ್ನ ವಿರುದ್ಧ ದೂರು ಕೊಟ್ರೆ ದೂರು ದಾಖಲಾಗುತ್ತೆ, ಅರೆಸ್ಟ್ ಮಾಡುವಂತಿಲ್ಲ ಆದರೂ ಅರೆಸ್ಟ್ ಮಾಡ್ತಾರೆ. ಅರೆಸ್ಟ್ ಮಾಡಿದ ಮೇಲೆ ಇಡೀ ರಾತ್ರಿ ಕಬ್ಬಿನಗದ್ದೆ, ಜಲ್ಲಿ ಕ್ರಷರ್, ಕಾಡಿಗೆ ಕರೆದುಕೊಂಡು ಹೋಗ್ತಾರೆ. ರಾಜ್ಯದಲ್ಲಿ ಯಾರಿಗೇ ರಕ್ಷಣೆ ಬೇಕಾದ್ರು ಪೊಲೀಸ್ ಸ್ಟೇಷನ್ ನಲ್ಲಿ ರಕ್ಷಣೆ ಸಿಗಲ್ಲ. ಕಬ್ಬಿನಗದ್ದೆ, ಜಲ್ಲಿ ಕ್ರಷರ್ ಗೆ ಹೋಗಬೇಕು. ಕಾಂಗ್ರೆಸ್ಸಿಗರಿಗೆ ರಕ್ಷಣೆ ಬೇಕು ಅಂದ್ರು ಕಾಡು, ಕ್ರಷರ್, ಕಬ್ಬಿನಗದ್ದೆಗೆ ಹೋಗಬೇಕು ಎಂದ ಅವರು, ನಾನು ಡಿಜಿಪಿ ಐಜಿ, ಸಿಎಂ ಎಲ್ಲರಿಗೂ ದೂರು ನೀಡಿದ್ದೇನೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವವರಿದ್ರೆ ಒಬ್ರಿಗೊಂದು...ಒಬ್ರಿಗೊಂದು ಮಾಡಲ್ಲ ಎಂದರು.
-ರಸ್ತೆಗೆ ಸಿಎಂ ಹೆಸರಿಗೆ ವಿರೋಧಪುಣ್ಯತ್ಮಾರ ಹೆಸರಿರುವ ರಸ್ತೆಯ ಹೆಸರನ್ನ ಅಳಿಸೋದು ಸೂಕ್ತವಲ್ಲ, ಹೊಸ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲಿ, ನಮಗ್ಯಾರಿಗೂ ಬೇಸರವಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಜನ ಅಧಿಕಾರ ಕೊಟ್ಟಿದ್ದಾರೆ ಅಂದ್ರೆ ನಾವು ಸರ್ವಾಧಿಕಾರಿಗಳಲ್ಲ, ನಿಯಮ ಮೀರಿ ನಡೆಯೋಕಾಗಲ್ಲ. ಹೊಸ ರಸ್ತೆ, ಹೆಸರಿಲ್ಲದ ರಸ್ತೆ ನೂರಾರಿವೆ ಅಲ್ಲಿಗೆ ಇಡಲಿ ಬೇಡ ಅಂದೋರು ಯಾರು ? ಸಿದ್ದರಾಮಯ್ಯನವರ ಹೆಸರನ್ನೇ ಇಡಲಿ, 2 ಬಾರಿ ಸಿಎಂ, ಜನನಾಯಕರು ಅವರ ಹೆಸರೇ ಇಡಲಿ, ಐತಿಹಾಸಿಕ ಹೆಸರನ್ನ ಅಳಿಸಿ ಇಡಬೇಕು ಅನ್ನೋದು ಎಷ್ಟರ ಮಟ್ಟಿಗೆ ಸೂಕ್ತ ಎಂದರು.
ನಾಳೆ ಎಲ್ಲರೂ ಅದನ್ನೇ ಮಾಡಿದರೆ ಏನಾಗಬಹುದು. ಅದಕ್ಕೆ ಹೊಸ ರಸ್ತೆಗೆ ಇಡಲಿ, ಬೇಕಾದ್ರೆ ಒಂದು ಹೊಸ ರಸ್ತೆಯನ್ನೇ ನಿರ್ಮಿಸಿ ಅವರ ಹೆಸರು ಇಡಲಿ ಎಂದ ಅವರು, ಮೈಸೂರು ಅರಸರು ಪ್ರಜೆಗಳನ್ನ ಮಕ್ಕಳಂತೆ ಕಂಡವರು. ರಾಜ್ಯದ ಅಭಿವೃದ್ಧಿ ಯನ್ನೇ ವೃತವಾಗಿ ಪರಿಗಣಿಸಿದವರು. ಪ್ರಜಾಪ್ರಭುತ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ತರ ಸಿಎಂ ಆಗಿದ್ರೆ ಪ್ರಜೆಗಳ ಕ್ಷೇಮವೇ ತನ್ನ ಕ್ಷೇಮ, ಪ್ರಜೆಗಳೇ ನನ್ನ ಕುಟುಂಬ ಅನ್ನೋರಿದ್ರೆ ರಾಜ್ಯ ಎಲ್ಲಿಗೋ ಹೋಗೋದು ಸಂತೆ ಸುಂಕ, ಭೂ ಕಂದಾಯ ದಿಂದಲೇ ಬ್ರಿಟಿಷರ ಅನುಮತಿ ಪಡೆದು ಅಭಿವೃದ್ಧಿ ಮಾಡಿದವರು ಅವರು ರಾಜ್ಯದ ಅಭಿವೃದ್ಧಿ ನಕಾಶೆಯನ್ನ ವಿಶ್ವಮಟ್ಟಕ್ಕೆ ಏರಿಸಿದ್ದರು ಎಂದು ಹೇಳಿದರು.