ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡಿ, ‘ಎಂತೋಳ್ ಅವಳ್’ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೂ ಏಕವಚನ ಪದ ಪ್ರಯೋಗ ಮಾಡುವ ದಮ್ ತಾಕತ್ತು ಇದೆಯಾ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಪ್ರಶ್ನಿಸಿದ್ದಾರೆ.

ಉಡುಪಿ: ರಾಜ್ಯದ ಮುಖ್ಯಮಂತ್ರಿಯಾಗಿ ಮಹಿಳೆಯರಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದ ಸಿ.ಎಂ. ಸಿದ್ದರಾಮಯ್ಯ ಅವರ ಉದ್ದಟತನ ಎಲ್ಲೆ ಮೀರಿದೆ. ಪತ್ರಿಕಾ ಗೋಷ್ಠಿಯಲ್ಲಿ ದೇಶ ಕಂಡ ಚಾಣಾಕ್ಷ ಮತ್ತು ಗೌರವಾನ್ವಿತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡಿ, ‘ಎಂತೋಳ್ ಅವಳ್’ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೂ ಏಕವಚನ ಪದ ಪ್ರಯೋಗ ಮಾಡುವ ದಮ್ ತಾಕತ್ತು ಇದೆಯಾ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಪ್ರಶ್ನಿಸಿದ್ದಾರೆ.ಈ ಹಿಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಏಕ ವಚನದಲ್ಲಿ ಕರೆದ, ಸಾರ್ವಜನಿಕ ಸಭೆಯಲ್ಲಿ ತನ್ನ ಸಮಸ್ಯೆ ಹೇಳಲು ಬಂದ ಬಡಮಹಿಳೆಗೆ ಆವಾಜ್ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೀಳು ವರ್ತನೆ ಜಗಜ್ಜಾಹೀರಾಗಿದೆ ಎಂದಿದ್ದಾರೆ.

ಮಾತೆತ್ತಿದರೆ ಮಹಿಳಾ ಸಬಲೀಕರಣ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿಗಳಿಗೆ ಮಹಿಳೆಯರ ಆತ್ಮ ಗೌರವದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ನಿಜಕ್ಕೂ ಖೇದಕರ. ದೇಶದ ರಕ್ಷಣಾ ಸಚಿವೆಯಾಗಿ ಸೇವೆ ಸಲ್ಲಿಸಿರುವ ನಿರ್ಮಲಾ ಸೀತಾರಾಮನ್ ಅವರನ್ನು ಏಕ ವಚನ ಬಳಸಿ ಅವಮಾನಿಸಿರುವ ಸಿ.ಎಂ. ಸಿದ್ದರಾಮಯ್ಯ ಅವರ ನಡೆಯನ್ನು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ತಮ್ಮಿಂದ ಆಗಿರುವ ಪ್ರಮಾದದ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಕ್ಷಮೆ ಕೊರಬೇಕು. ತಪ್ಪಿದಲ್ಲಿ ರಾಜ್ಯ ನಾಯಕತ್ವದ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.